ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಾಕಿ ಉಳಿದ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಆಗಲಿದ್ದು ಪದ್ಮನಾಭನಗರದಿಂದ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಬಹುತೇಕ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಬಾಕಿ ಉಳಿದಿರುವ 8 ಕ್ಷೇತ್ರಗಳ ಅಭ್ಯರ್ಥಿಯ ಪಟ್ಟಿ ಇಂದೇ ಪ್ರಕಟವಾಗಲಿದೆ ಎಂದು ತಿಳಿಸಿದರು. ಪದ್ಮನಾಭನಗರ ಕಾಂಗ್ರೆಸ್ ಅಭ್ಯರ್ಥಿ ರಘುನಾಥ ನಾಯ್ಡು ಬಿ ಫಾರ್ಮ್ ಸಮೇತರಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸದ್ಯ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ರಘುನಾಥ್ ನಾಯ್ಡು ನಾಳೆಯೊಳಗೆ ಕ್ಷೇತ್ರದಿಂದ ಸಂಸದ ಡಿ.ಕೆ.ಸುರೇಶ್ ಸ್ಪರ್ಧೆ ಮಾಡುವುದಾದರೆ ತಾವು ಹಿಂದೆ ಸರಿಯಲಿದ್ದಾರೆ.
ಕಾಂಗ್ರೆಸ್ ನಾಯಕರ ಸಭೆ:ಪಕ್ಷದಲ್ಲಿ ಘೋಷಣೆಯಾಗದೇ ಉಳಿದಿರುವ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ನಗರದ ಖಾಸಗಿ ಹೋಟೆಲ್ನಲ್ಲಿ ರಾಜ್ಯ ನಾಯಕರು ಕಾಂಗ್ರೆಸ್ ವೀಕ್ಷಕರ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸಭೆ ನಡೆದಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪಕ್ಷದ ವೀಕ್ಷಕರು ಉಪಸ್ಥಿತರಿದ್ದರು. ಚುನಾವಣೆ ಸಿದ್ಧತೆ, ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ.
ಚುನಾವಣಾ ಅಧಿಕಾರಿಗಳು ಭೇಟಿ, ಪರಿಶೀಲನೆ:ವೀಕ್ಷಕರ ಜೊತೆಗೆ ಕಾಂಗ್ರೆಸ್ ನಾಯಕರ ಸಭೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆ ಮಧ್ಯೆ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಭೆಯಲ್ಲಿ ನಡೆಯುವ ಹಾಲ್ ಒಳಗೆ ಹೋಗಲು ಚುನಾವಣಾ ಅಧಿಕಾರಿಗಳ ಪ್ರಯತ್ನ ಮಾಡಿದಾಗ ಕೆಲ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಮನವೊಲಿಸಿ ಒಳಗೆ ತೆರಳಿದ ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ಮುಗಿಸಿ, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹೋಗಿದ್ದಾರೆ.
ಪದ್ಮನಾಭನಗರದಿಂದ ಡಿ.ಕೆ.ಸುರೇಶ್ ಕಣಕ್ಕಿಳಿಯುವ ವದಂತಿ ವಿಚಾರಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮಾತನಾಡಿ, ಈ ವಿಷಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂಗಳದಲ್ಲಿದೆ. ಇವತ್ತು ರಾತ್ರಿ ಪಟ್ಟಿ ಬಿಡುಗಡೆ ಆಗಲಿದೆ. ಇಂದು ದೇಶದ ಹಲವಾರು ಕಾಂಗ್ರೆಸ್ ನಾಯಕರು ಮೀಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.