ಬೆಂಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಸಾಗುವಳಿ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ಮಾಡುತ್ತಿದ್ದು, ರಾಜ್ಯದಲ್ಲಿ ಅನಧಿಕೃತ ಗುತ್ತಿಗೆ ಕೃಷಿ ಪ್ರಮಾಣ ಶೇ 25 ರಷ್ಟಿದೆ. ಆದರೆ, ಇವರಿಗೆ ಸರ್ಕಾರದಿಂದ ಯಾವುದೇ ಸವಲತ್ತು ಸಿಗುವುದಿಲ್ಲ.
ರಾಜ್ಯದಲ್ಲಿ ಒಟ್ಟು ಭೂಮಿ ಅಂದಾಜು 121.62 ಲಕ್ಷ ಹೆಕ್ಟೇರ್ ಇದ್ದು, ಸುಮಾರು 79 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಇನ್ನು ರಾಜ್ಯದಲ್ಲಿ ಪಾಳುಬಿದ್ದಿರುವ ಭೂಮಿ ಸುಮಾರು 15 ಲಕ್ಷ ಹೆಕ್ಟೇರ್ ಇದೆ. ಸಾಮಾನ್ಯವಾಗಿ ಭೂಮಿ ಇದ್ದರೂ ಕೃಷಿ ಮಾಡದ ರೈತರು, ಭೂಮಿಯೇ ಇಲ್ಲದ ರೈತರು ರಾಜ್ಯದಲ್ಲಿ ಇದ್ದಾರೆ. ಹಾಗಾಗಿ, ಕೃಷಿ ಭೂಮಿ ಇರುವ ರೈತರಿಂದ ಭೂಮಿ ಪಡೆದು ( ಲೀಸ್ ಗೆ) ಸಾಗುವಳಿ ಮಾಡುತ್ತಿರುತ್ತಾರೆ. ಒಂದೊಂದು ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಗುತ್ತಿಗೆಯನ್ನು ಕರೆಯಲಾಗುತ್ತದೆ.
ಮೌಖಿಕ ಗುತ್ತಿಗೆ : ರಾಜ್ಯದಲ್ಲಿ ನಿಷೇಧವಿದ್ದರೂ ಗೇಣಿ, ಕೋರು, ಪಾಲು, ಫಸಲು ಗುತ್ತಿಗೆ ಮೊದಲಾದ ಹೆಸರಿನಲ್ಲಿ ಅನಧಿಕೃತವಾಗಿ ನಡೆಯುತ್ತಿದೆ. ಒಂದು ವರ್ಷಕ್ಕೆ ಒಂದು ಎಕರೆಗೆ ಇಂತಿಷ್ಟು ದರ ಅಥವಾ ರಾಗಿ, ಭತ್ತ, ಜೋಳ ನೀಡುವ ಬಗ್ಗೆ ಕರಾರು ಮಾಡಿಕೊಳ್ಳಲಾಗುತ್ತದೆ.
ಒಂದು ವರ್ಷಕ್ಕೆ ಎಕರೆಗೆ 10 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೂ ದರ ನಿಗದಿಪಡಿಸಲಾಗುತ್ತದೆ. ಇನ್ನೂ ಭೂ ಮಾಲೀಕ ಭೂಮಿಯಷ್ಟೇ ಕೊಡುತ್ತಾನೆ. ಬೀಜ, ಗೊಬ್ಬರ ಸೇರಿದಂತೆ ಎಲ್ಲವೂ ಗುತ್ತಿಗೆ ಪಡೆದ ರೈತನೇ ಭರಿಸಬೇಕು. ಉತ್ತಮವಾಗಿ ಫಸಲು ಬರಬೇಕು. ಜೊತೆಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದಾಗ ಮಾತ್ರ ಗುತ್ತಿಗೆ ರೈತರಿಗೆ ಹಣ ಸಿಗುತ್ತದೆ. ಒಂದು ವೇಳೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಕೆಲವು ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ.
ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿಸಲು ಹಾಗೂ ಬಳಕೆಯಾಗದ ಪಾಳುಭೂಮಿಯನ್ನು ವ್ಯವಸಾಯಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಗುತ್ತಿಗೆ ನೀಡುವ ಪದ್ಧತಿಯನ್ನು ಕಾನೂನುಬದ್ಧ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಗುತ್ತಿಗೆ ಪದ್ಧತಿ ನಿಷೇಧ ಮಾಡಲಾಗಿದೆ. ಕೇಂದ್ರ ನೀತಿ ಆಯೋಗದ ಸಲಹೆಯಂತೆ ಕೃಷಿ ಭೂಮಿ ಗುತ್ತಿಗೆ ಪದ್ಧತಿಯನ್ನು ಸಕ್ರಮ ಮಾಡಲು ಇಲಾಖೆಗಳು, ತಜ್ಞರ ಜತೆ ನಡೆದ ಚರ್ಚೆಯ ನಂತರ ಕಾನೂನು ಸಿದ್ಧಪಡಿಸಲಾಗಿದ್ದು, ಹೊಸ ಕಾನೂನಿನ ಮೂಲಕ ಭೂಮಿ ಮಾಲೀಕರು ಹಾಗೂ ಗುತ್ತಿಗೆದಾರರ ನಡುವೆ ಯಾವುದೇ ವಿವಾದ ತಲೆದೋರದಂತೆ ಇಬ್ಬರ ಹಿತವನ್ನೂ ಕಾಯಲಾಗುತ್ತದೆ.
ದೇಶದಲ್ಲಿ ಕೃಷಿ ಭೂಮಿ ಗುತ್ತಿಗೆ ನೀಡುವುದಕ್ಕೆ ಏಕರೂಪ ಕಾನೂನು ಇಲ್ಲ. ಭೂ ಸುಧಾರಣೆ ಕಾಯ್ದೆ ತಂದಿರುವ ರಾಜ್ಯ ಸೇರಿ ಕೆಲವೆಡೆ ನಿಷೇಧವಿದ್ದರೆ, ಇನ್ನೂ ಕೆಲವೆಡೆ ಗುತ್ತಿಗೆಗೆ ಅವಕಾಶ ಇದೆ. ಕೆಲವು ರಾಜ್ಯಗಳಲ್ಲಿ ಗುತ್ತಿಗೆದಾರನಿಗೇ ಭೂಮಿ ಖರೀದಿಸಲು ಅವಕಾಶವಿದೆ. ಹಾಗಾಗಿ, ನೀತಿ ಆಯೋಗ ಏಕರೂಪ ಕಾನೂನಿಗೆ ಸಲಹೆ ನೀಡಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರವೇ ಕೃಷಿ ಭೂಮಿ ಗುತ್ತಿಗೆಗೆ ಅವಕಾಶ ಕಲ್ಪಿಸಲು ಮುಂದಾಗಿತ್ತಾದರೂ ರೈತ ವರ್ಗದ ವಿರೋಧದ ಹಿನ್ನೆಲೆಯಲ್ಲಿ ಕೈ ಬಿಡಲಾಗಿತ್ತು. ಇದೀಗ ಕಂದಾಯ ಇಲಾಖೆ ಕಾನೂನು ಸಿದ್ಧಪಡಿಸಿ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದೆ.