ಬೆಂಗಳೂರು :ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ. ನಮ್ಮ ಪಕ್ಷದ ಡಿಎನ್ಎನಲ್ಲಿಯೂ ಅದು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು. ಈ ಮೂಲಕ ಯಡಿಯೂರಪ್ಪ ಕುಟುಂಬಕ್ಕೆ ಉತ್ತರಾಧಿಕಾರ ಸಿಗುವುದಿಲ್ಲ ಎನ್ನುವ ಸುಳಿವು ನೀಡಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷ ಉತ್ತರಾಧಿಕಾರಿಗಳ ಸಂಸ್ಕೃತಿಯ ಪಕ್ಷವಲ್ಲ, ನಮ್ಮ ಪಕ್ಷಕ್ಕೆ ಯಾರೋ ಒಬ್ಬ ವ್ಯಕ್ತಿ ಮಾಲೀಕ ಅಲ್ಲ, ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು. ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ, ಡಿಎಂಕೆಗೆ ಕರುಣಾನಿಧಿ, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್, ಹೀಗೆ ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಆದರೆ, ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು ಎಂದರು.
ಬಿಎಸ್ವೈ ಬಿಜೆಪಿ ನಾಯಕ, ಮಾಲೀಕರಲ್ಲ :ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕರೇ ಹೊರತು, ಮಾಲೀಕರಲ್ಲ. ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕ, ಅಮಿತ್ ಶಾ ನಾಯಕ. ಯಡಿಯೂರಪ್ಪ ನಾಯಕನಾದರೆ ಕಾರ್ಯಕರ್ತರೇ ಮಾಲೀಕರು. ಓನರ್ಶಿಪ್ ಬೇರೆ, ನಾಯಕರ ಮಕ್ಕಳು ರಾಜಕೀಯಕ್ಕೆ ಬರುವುದು ಬೇರೆ. ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳುತ್ತದೆ.
ಆದರೆ, ನಮ್ಮ ಪಕ್ಷದಲ್ಲಿ ಕೋರ್ ಕಮಿಟಿ, ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ನಮ್ಮ ಪಕ್ಷ ಎಲ್ಲರಿಗೂ ಯೋಗ್ಯತೆ, ಪರಿಶ್ರಮದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶ ಕೊಡುತ್ತದೆ. ಉತ್ತರಾಧಿಕಾರಿ ಸಂಸ್ಕೃತಿಗೆ ಅವಕಾಶ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ನಮ್ಮದು ಕೇಡರ್ ಬೇಸ್ಡ್ ಡಿಎನ್ಎ ಎಂದರು.