ಬೆಂಗಳೂರು: ಹೆಚ್ ಡಿ ದೇವೇಗೌಡರ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯವರು ಬರೀ ಬೊಬ್ಬೆ ಹೊಡೆಯುತ್ತಿದ್ದಾರೆ ಅಷ್ಟೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತಿರುಗೇಟು ನೀಡಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯ ಅಂತೀರಾ, ನೋಡಿ ವೇದಿಕೆ ಮೇಲೆ ಹೇಗೆ ಪ್ರಜ್ವಲ್, ಕುಮಾರಸ್ವಾಮಿ, ರೇವಣ್ಣ ಇದ್ದಾರೆ. ದೇವೇಗೌಡರ ವೃಕ್ಷದ ಬೀಜ ಬಲವಾಗಿದೆ. ಇದು ಮಾರುವ ಬೀಜವಲ್ಲ, ಬಿತ್ತನೆ ಬೀಜ. ಯಾವಾಗಲೂ ಇರುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ನಾಯಕರಿಗೆ ಟಾಂಗ್ ನೀಡಿದರು.
ವೈಎಸ್‌ವಿ ದತ್ತಾ ಅವರಿಗೆ ಹೇಳಿದ್ದೆ, ತಂದೆ ಸಮಾನರಾದ ದೇವೇಗೌಡರಿಗೆ ಮೋಸ ಮಾಡಬೇಡಿ ಅಂತ. ಈಗ ಅವರ ಸ್ಥಿತಿ ಏನಾಗಿದೆ, ಪಕ್ಷ ಬಿಟ್ಟು ಹೋದವರು ಮತ್ತೆ ಕೆನ್ನೆಗೆ ಹೊಡೆದುಕೊಂಡು ಇಲ್ಲಿಗೆ ಬರಬೇಕು. ಬೇರೆಯವರ ದುಡ್ಡಿಗೆ ನಾವು ಆಸೆ ಪಟ್ಟವರಲ್ಲ, ಕುಮಾರಸ್ವಾಮಿಯವರು ರಾಜ್ಯದ ಎಂಟು ಸಾವಿರದ ಐನೂರು ಕಿ.ಮೀ. ಸುತ್ತಿ ಮೂವತ್ತು ಸಾವಿರ ಹಳ್ಳಿಗಳಲ್ಲಿ ಪಂಚರತ್ನ ರಥಯಾತ್ರೆ ಮಾಡಿದ್ದಾರೆ. ಇದನ್ನು 45 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನೀವು ಬಸ್, ಹೆಲಿಕಾಪ್ಟರ್ ಮೂಲಕ ಈ ಊರಿನಿಂದ ಆ ಊರಿಗೆ, ಆ ಊರಿನಿಂದ ಈ ಊರಿಗೆ ಹೋಗುವುದಷ್ಟೇ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತು : ನಾವು ಹೋದ ಕಡೆಯೆಲ್ಲಾ ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಚುನಾವಣಾ ಪ್ರಚಾರ ಎರಡು ತಿಂಗಳ ಹಿಂದೆಯೇ ಶುರುವಾಗಿದೆ. ಜನರಿಗೋಸ್ಕರ ಯೋಜನೆ ಕೊಡುತ್ತೇನೆ ಅಂದಿದ್ದ ಏಕೈಕ ವ್ಯಕ್ತಿ ಕುಮಾರಸ್ವಾಮಿ. ಸ್ತ್ರೀ ಶಕ್ತಿ ಸಾಲ ಮನ್ನಾ, ರೈತರ ಸಾಲ ಮನ್ನಾ ಮತ್ತೆ ಮಾಡೋದಾಗಿ ಹೇಳಿದ್ದಾರೆ. 8 ಗಂಟೆ ರೈತರಿಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ಪಂಚರತ್ನ ಯಾತ್ರೆ ಶೋ ಕೊಡುವ ಯಾತ್ರೆಯಲ್ಲ. ಜನರ ಕಷ್ಟ ಅರ್ಥ ಮಾಡಿಕೊಂಡು 8 ಸಾವಿರ ಕಿ.ಮೀ ಸುತ್ತುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಸಿಎಂ ಇಬ್ರಾಹಿಂ ಯಾವ ಪಕ್ಷದಲ್ಲಿ ಇರ್ತಾರೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ಇಬ್ರಾಹಿಂ ನಮ್ಮ ಜೊತೆ ಇದ್ದಾರೆ. ಜೆಡಿಎಸ್ ಖಂಡಿತ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು. ಬಳಿಕ ನಾವು ಕಿತ್ತಾಡಿಕೊಂಡಿದ್ವಿ ಅಂದ್ರೆ ಅದು ಭ್ರಮೆ ಎಂದ ರೇವಣ್ಣ, ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ನವರು ಮತ ಕೇಳಬಾರದು. ನಾನು ಅಧಿಕಾರದಲ್ಲಿದ್ದಾಗ ಒಂದು ರೂಪಾಯಿ ಕರೆಂಟ್ ಬಿಲ್ ಜಾಸ್ತಿ ಮಾಡಿರಲಿಲ್ಲ. 10 ವರ್ಷದಲ್ಲಿ 48 ಸಾವಿರ ಕೋಟಿ ಬಾಕಿ ನಷ್ಟ ಇದೆ. ಬೆಂಗಳೂರಿಗೆ ದೇವೇಗೌಡ್ರು ಮಿಲಿಟರಿ ಲ್ಯಾಂಡ್ ಕೊಡಿಸಿದರು, ದೇವೇಗೌಡರ ಕೊಡುಗೆ ಅಪಾರ ಇದೆ ಎಂದರು.
ಮಾರ್ಚ್ 26 ಕ್ಕೆ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ: ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರದ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಹೊಂದಿರುವ ಸರ್ಕಲ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, 'ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂತಹ ಸಮಾವೇಶ ಅದಾಗಿರುತ್ತದೆ ಎಂದರು.