ಬೆಂಗಳೂರು:ಕೋಳಿ ಮಾಂಸದಲ್ಲಿ ಕೊರೊನಾ ಸೋಂಕು ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ಹಾಗೂ ತಪ್ಪು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ನಮ್ಮ ದೇಶದಲ್ಲಿ ಕೋಳಿಗಳಿಗೆ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡ ಬಗ್ಗೆ ಈವರೆಗೆ ಯಾವುದೇ ವರದಿಗಳಿಲ್ಲ. ಸೋಂಕು-ಪೀಡಿತ ಮನುಷ್ಯರ ಸಂಪರ್ಕದಿಂದ ಮಾತ್ರ ಈ ಸೋಂಕು ಇತರರಿಗೆ ಹರಡುತ್ತದೆ ಎಂದು ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಕೋಳಿಯ ಮಾಂಸವನ್ನು 100 ಡಿಗ್ರಿ ಉಷ್ಣಾಂಶದಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ. ಆದಕಾರಣ ಸಾರ್ವಜನಿಕರು ಕೊರೊನಾ ವೈರಾಣು ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿಗಳಿಗೆ ಕಿವಿಕೊಡಬಾರದು ಎಂದು ತಿಳಿಸಿದೆ.
ಈ ರೀತಿಯ ವದಂತಿಗಳು ಹರಡುವುದರಿಂದ ಉತ್ತಮ ಪೌಷ್ಠಿಕಾಂಶ ನೀಡುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯ ಮೇಲೆ ಗಣನೀಯ ದುಷ್ಪರಿಣಾಮಗಳಾಗುತ್ತವೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಬಾಣಂತಿಯರು, ಪೋಷಕಾಂಶ ಕೊರತೆಯಿಂದ ನರಳುತ್ತಿರುವ ಹಿನ್ನೆಲೆ ಇಂತಹ ವದಂತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುತ್ತಿವೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಕೋಳಿ ಮಾಂಸ ಮತ್ತು ಮೊಟ್ಟೆ ಉತ್ತಮ ಪ್ರೋಟಿನ್ ಪೂರೈಸುವ ಆಹಾರವಾಗಿವೆ. ಯಾರೂ ಇಂತಹ ವದಂತಿಗಳನ್ನು ಹರಡಬಾರದು ಎಂದು ಪಶು ಸಂಗೋಪನಾ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಎ. ಬಿ. ಇಬ್ರಾಹಿಂ, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.