ಬೆಂಗಳೂರು:ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ರೂಪುಗೊಂಡಿರುವ ಮತ್ತು ಆಕರ್ಷಕ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ವೀಕ್ಷಿಸಲು ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರವ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ಖುದ್ದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸದ್ಯಕ್ಕೆ 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಐಒಸಿ ಪೆಟ್ರೋಲ್ ಬಂಕ್ ಕಡೆಯಿಂದ ಪ್ರವಾಸಿಗರು ಪ್ರತಿಮೆಯನ್ನು ತಲುಪಿ ವೀಕ್ಷಿಸಲು ಅನುಕೂಲ ಮಾಡಿಕೊಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದರ ಜತೆಗೆ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಗರಿಷ್ಠ 80 ವಾಹನಗಳಿಗೆ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗುವುದು. ಈ ಅನುಕೂಲ ಒಂದು ವಾರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರತಿಮೆ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳು ಗರಿಷ್ಠ ಅರ್ಧ ಗಂಟೆ ಕಾಲ ನಿಲ್ಲಿಸಲು ಅವಕಾಶ ನೀಡಲಾಗುವುದು ಎಂದರು.