ಬೆಂಗಳೂರು:ಐಎಂಎ ಜ್ಯುವೆಲ್ಲರ್ಸ್ ವಿಚಾರದಲ್ಲಿ ಉಂಟಾಗಿರುವ ವಿವಾದದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದ್ದು, ಐಎಂಎ ಅವ್ಯವಹಾರದಲ್ಲಿ ನನ್ನ ಪಾಲು ಇಲ್ಲ ಎಂದು ಮಾಜಿ ಸಚಿವ ರೋಷನ್ ಬೇಗ್ ಸ್ಪಷ್ಟಪಡಿಸಿದ್ದಾರೆ.
ಟ್ವಿಟರ್ ಮೂಲಕ ಈ ವಿಚಾರ ಪ್ರಸ್ತಾಪಿಸಿರುವ ಅವರು, ನಕಲಿ ವಿಚಾರಗಳು ಇಂದು ನನ್ನ ಹೆಸರು ಕೆಡಿಸುತ್ತಿವೆ. ಐಎಂಎ ಸಮೂಹದ ಅವ್ಯವಹಾರದಲ್ಲಿ ನನ್ನನ್ನ ಸಿಲುಕಿಸುವ ಯತ್ನ ನಡೆದಿದೆ. ಐಎಂಎ ಸಮೂಹದಲ್ಲಿ ನಾನು ಯಾವುದೇ ರೀತಿಯ ಪಾಲುದಾರಿಕೆ ಹೊಂದಿಲ್ಲ. ಒಬ್ಬ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಐಎಂಎ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನನ್ನ ಸಹಭಾಗಿತ್ವ ಇದೆ ಹೊರತು ಯಾವುದೇ ವ್ಯವಹಾರಿಕ ಸಂಬಂಧ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಕ್ಷೇತ್ರವಾದ ಶಿವಾಜಿನಗರ ವ್ಯಾಪ್ತಿಯಲ್ಲಿಯೇ ಆಭರಣ ಮಳಿಗೆ ಇದ್ದು, ಇದು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡುವ ಸಾಮಾಜಿಕ ಕಳಕಳಿಗೆ ಸಹಕಾರ ನೀಡಿದ್ದೇನೆ. ಶಿವಾಜಿನಗರದ ವಿ ಕೆ ಉಬೇದುಲ್ಲಾ ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಮಾಡಿದ ಕಾರ್ಯಕ್ಕೆ ನಾನು ಕೈ ಜೋಡಿಸಿದ್ದೇನೆ. ಇದರಿಂದ ನಮ್ಮ ಕ್ಷೇತ್ರ ವ್ಯಾಪ್ತಿಯ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಸಂಸ್ಥೆ ಅಲ್ಲದೆ ಹಲವಾರು ಸಂಸ್ಥೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಸಹಾಯ ಹಸ್ತ ಚಾಚಿವೆ. ಇಂತಹ ಯಾವುದೇ ಕಂಪನಿಯ ಜೊತೆ ನಾನು ಶಾಸಕನಾಗಿ ಸಂಪರ್ಕ ಹೊಂದಿದ್ದೇನೆ ಹೊರತು, ವ್ಯವಹಾರಿಕ ಸಂಬಂಧ ಹೊಂದಿಲ್ಲ ಎಂದಿದ್ದಾರೆ.
ಕ್ಷೇತ್ರದ ಜನತೆಯಲ್ಲಿ ನಾನು ಈ ಮೂಲಕ ಮನವಿ ಮಾಡಿಕೊಳ್ಳುವುದು ಏನೆಂದರೆ ಅನಗತ್ಯ ಹಾಗೂ ಸುಳ್ಳು ಆರೋಪಗಳಿಗೆ ಯಾರು ಕಿವಿಗೊಡಬೇಡಿ. ನನ್ನ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ.