ಬೆಂಗಳೂರು: ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆಕ್ಸಿಜನ್ ನಮಗೆ ನೀಡಬೇಕೆಂದು ಮನವಿ ಮಾಡಲಾಗಿದ್ದು, ಸಂಜೆಯೊಳಗೆ ತಿಳಿಸುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ ಎಂದು ತಿಳಿಸಿದರು.
ಆಕ್ಸಿಜನ್ ಸರಬರಾಜು ಬಗ್ಗೆ ಇಂದು ಸಭೆ ನಡೆಸಲಾಗಿದೆ. ಸಭೆಯಲ್ಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳು ಭಾಗಿಯಾಗಿದ್ರು. ಅವರಿಗೆ ಹಲವು ಸೂಚನೆ ನೀಡಲಾಗಿದೆ ಎಂದರು. ಆಕ್ಸಿಜನ್ ಅನ್ನು ಬೇರೆ ರಾಜ್ಯಗಳಿಗೆ ಕಳಿಸಬಾರದು, ನಮಗೆ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ನಮಗೆ ಸಿಗುವ ವಿಶ್ವಾಸ ಇದೆ ಎಂದರು.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಬೇಕಿದೆ, ಅದನ್ನು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ನಮ್ಮಲ್ಲಿ ತಯಾರಾಗುವ ಆಕ್ಸಿಜನ್ ನಮಗೆ ಉಳಿದರೆ ನಮ್ಮಲ್ಲಿ ಸಹಾಯವಾಗಲಿದೆ. ಜಿಂದಾಲ್ ಸಂಸ್ಥೆ ಪ್ರೊಡಕ್ಷನ್ ಹೆಚ್ಚು ಮಾಡಿದ್ದಾರೆ. ಸದ್ಯ 800-1000 ಟನ್ ಪ್ರೊಡಕ್ಷನ್ಸ್ ಮಾಡ್ತಿದ್ದಾರೆ. ಜಿಂದಾಲ್ ಜೊತೆ ಮಾತನಾಡಿದ್ದೇನೆ. ಕಬ್ಬಿಣ ಉತ್ಪಾದನೆ ಸ್ಥಗಿತಗೊಳಿಸಿ ಪೂರೈಸಲು ಮನವಿ ಮಾಡಿದ್ದೇನೆ ಎಂದರು.