ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ ಲಸಿಕೆ ಕೊಡುವುದರಲ್ಲಿ ವಿಳಂಬವಾಗುತ್ತಿದೆ. ಬರುವ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ವ್ಯಾಕ್ಸಿನ್ ಸರಬರಾಜು ಆಗಲಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿ ಮಾತನಾಡಿದ ಅವರು, ಎಸ್ಎಂಎಸ್ ಮೂಲಕ ಮಾಹಿತಿ ನೀಡಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತದೆ. ಸದ್ಯ ಎರಡನೇ ಡೋಸ್ಗೆ ಆದ್ಯತೆ ನೀಡಲಾಗುತ್ತದೆ. ಸುಮ್ಮನೆ ಆತಂಕದಲ್ಲಿ ಗುಂಪು ಸೇರಿಕೊಂಡು ಲಸಿಕೆ ಪಡೆಯಲು ನಿಲ್ಲಬೇಡಿ. ಸ್ವಲ್ಪ ಕೊರತೆ ಇರುವ ಕಾರಣ ಸ್ವಲ್ಪ ಕಾಯಬೇಕಾಗಲಿದೆ. ಇನ್ನೆರಡು ದಿನದಲ್ಲಿ 3200 ಬೆಡ್ ಸಾಮರ್ಥ್ಯದ ಸ್ಟೆಪ್ ಡೌನ್ ಆಸ್ಪತ್ರೆಗಳು ಸಿದ್ಧಗೊಳ್ಳಲಿದ್ದು, ಆಸ್ಪತ್ರೆ ಬೆಡ್ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಆಕ್ಸಿಜನ್ ಕಾನ್ಸನ್ಟ್ರೇಟರ್ಗಳ ಬಳಕೆಯಿಂದ ಐಸಿಯು ಮೇಲಿನ ಒತ್ತಡವೂ ತಗ್ಗಲಿದೆ. ಸರ್ಕಾರಿ ಕೋಟಾದ ಬೆಡ್ಗಳನ್ನು ಖಾಸಗಿ ಆಸ್ಪತ್ರೆಗಳು ತಪ್ಪದೇ ನೀಡಬೇಕು. ಬೆಡ್ ಖಾಲಿಯಾಗುತ್ತಿದ್ದಂತೆ ಅದನ್ನು ಸರ್ಕಾರದಿಂದ ಶಿಫಾರಸುಗೊಂಡ ರೋಗಿಗೆ ನೀಡಬೇಕು. ಇದೆಲ್ಲವೂ ಆಪ್ತಮಿತ್ರ ಆ್ಯಪ್ನಲ್ಲಿ ಪಾರದರ್ಶಕವಾಗಿ ನಿರ್ವಹಣೆಯಾಗುವಂತೆ ಸೂಚಿಸಲಾಗಿದೆ.