ಬೆಂಗಳೂರು: ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ವಿಷಯದಲ್ಲಿ ನಾನು ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೇ ಪಂಚಮಸಾಲಿ ಸಮುದಾಯ 2ಎಗೆ ಸೇರಬೇಕು ಎನ್ನುವ ನಿಲುವು ನಮ್ಮದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಸಚಿವ ಸಂಪುಟ ಸಭೆಯಲ್ಲಿ ನಡೆದಿದೆ ಎನ್ನಲಾದ ಮಾತಿನ ಚಕಮಕಿ ಸತ್ಯಕ್ಕೆ ದೂರವಾದ ಅಂಶವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ವಿರೋಧ ವ್ಯಕ್ತಪಡಿಸುವುದು ನಮ್ಮ ನಿಲುವಲ್ಲ. ಮೊದಲಿನಿಂದಲೂ ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ದೊರಕಬೇಕು ಎನ್ನುವ ಅಭಿಲಾಷೆ ಹಾಗೂ ಪ್ರತಿಪಾದನೆ ಮಾಡಿಕೊಂಡು ಬಂದಿದ್ದೇವೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಸಮುದಾಯದಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದರು.