ಬೆಂಗಳೂರು :ಕೊರೊನಾ ಸೋಂಕಿನಿಂದ ರಾಜ್ಯ ಕಂಗೆಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಂತ್ರಿಮಂಡಲದ ಬಹುತೇಕ ಸಚಿವರು ತಮ್ಮ ಖಾತೆಗಳ ಕಡೆ ತಿರುಗಿಯೂ ನೋಡದೆ ನಿರ್ಲಕ್ಷ್ಯತೆ ತೋರುತ್ತಿರುವ ಅಂಶ ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕೊರೊನಾ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಲು ಕಾರ್ಯಾಂಗವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಬಹುತೇಕ ಸಚಿವರು ತಮ್ಮ ತಮ್ಮ ಖಾತೆಗಳ ಕತೆ ಏನಾಗಿದೆ?ಎಂದು ತಿಳಿಯುವ ಗೋಜಿಗೂ ಹೋಗಿಲ್ಲ.
ಸರ್ಕಾರದ ಪ್ರತಿ ಇಲಾಖೆಗಳಿಗೂ ರಾಜ್ಯಾದ್ಯಂತ ತನ್ನದೇ ಕಾರ್ಯವ್ಯಾಪ್ತಿಯಿದೆ. ಕೊರೊನಾ ಭೀತಿಯಿಂದ ಎಲ್ಲ ವಲಯಗಳೂ ಕಂಗಾಲಾಗಿವೆ. ಆದರೆ, ಬಹುತೇಕ ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲೋ, ಜಿಲ್ಲೆಯಲ್ಲೋ ನೆಲೆಸಿ ಜನರನ್ನು ಮನೆ ಒಳಗೆ ಕಳಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಒಂದು ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಅಂದರೆ ರಾಜ್ಯವ್ಯಾಪಿ ಇರುವ ಅದರ ಕಾರ್ಯಕ್ಷೇತ್ರದಲ್ಲಿ ಆಗಿರುವ ತೊಂದರೆ ಗಮನಿಸುವುದು ಮತ್ತು ಪರಿಹಾರ ಕಲ್ಪಿಸಿಕೊಡುವುದು ಸಚಿವರ ಕೆಲಸ.