ಬೆಂಗಳೂರು:ಸಚಿವ ಸಂಪುಟ ವಿಸ್ತರಣೆಗೂ, ಅಮಿತ್ ಶಾ ರಾಜ್ಯ ಭೇಟಿಗೂ ಯಾವುದೇ ಸಂಬಂಧವಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ನಾಯಕರು ಚರ್ಚಿಸಿ, ಸೂಕ್ತ ಸಮಯದಲ್ಲಿ ಈ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ಹಿನ್ನೆಲೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಭೆ ನಡೆಸಿದರು. ಈ ವೇಳೆ ಅಮಿತ್ ಶಾ ಕಾರ್ಯಕ್ರಮದ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಮಿತ್ ಶಾ ಬರುವ ದಿನಾಂಕ ನಿಗದಿಯಾಗಿದೆ. ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಇದೇ ತಿಂಗಳು 16 ಮತ್ತು 17 ರಂದು ಆಗಮಿಸಲಿದ್ದಾರೆ. ಮೊದಲು ಬೆಂಗಳೂರಿನಲ್ಲಿ ಗೃಹ ಇಲಾಖೆಯ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಾರೆ. ನಂತರ ಭದ್ರಾವತಿಯಲ್ಲಿ ಸೆಂಟ್ರಲ್ ರಿಸರ್ವ್ ಫೋರ್ಸ್ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 17 ರಂದು ಬೆಳಗಾವಿಯಲ್ಲಿ ಜನಸೇವಕ್ ಸಮಾವೇಶದಲ್ಲಿ ಭಾಗವಹಿಸಿ ದೆಹಲಿಗೆ ಮರಳಲಿದ್ದಾರೆ ಎಂದರು.