ಬೆಂಗಳೂರು :ಶಿವಮೊಗ್ಗದ ಹುಣಸೋಡು ಮಾದರಿಯಲ್ಲೇ ಚಿಕ್ಕಬಳ್ಳಾಪುರದಲ್ಲಿ ಇಂದು ಸ್ಫೋಟ ಸಂಭವಿಸಿದೆ. ಈ ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿಕರು ಎಂಬ ಮಾಹಿತಿ ಇದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಮಾತನಾಡಿದ ಅವರು, ಇದರ ಹಿಂದೆ ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆ ಆಗಬೇಕು. ಈ ಸರ್ಕಾರ ಬರೀ ಲೂಟಿ ಮಾಡೋದ್ರಲ್ಲಿ ಮಗ್ನವಾಗಿದೆ. ಐದಾರು ಜನ ಅಮಾಯಕರು ಸಾವನ್ನಪ್ಪಿದ್ದಾರೆ.
ಇಷ್ಟೊಂದು ಜಿಲೆಟಿನ್ ಹೇಗೆ ಸಂಗ್ರಹ ಮಾಡ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಕ್ವಾರಿಗಳಿಂದ ಹೇಗೆ ವಸೂಲಿ ಮಾಡ್ತಾರೆ ಅಂತಾ ಅಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿನ ದುರ್ಘಟನೆ ಬಳಿಕವೂ ಸರ್ಕಾರ ಎಚ್ಚೆತ್ತಿಲ್ಲ. ಇದರ ಹಿಂದೆ ದೊಡ್ಡ ಭ್ರಷ್ಟಾಚಾರ ಇರೋದೇ ಇದಕ್ಕೆಲ್ಲಾ ಕಾರಣ. ಸರ್ಕಾರ ಸತ್ತು ಬಿದ್ದಿದೆ. ಲೂಟಿ ಮತ್ತು ದಂಧೆ ಮಾಡುವುದರಲ್ಲಿ ನಿರತರಾಗಿದ್ದಾರೆ.
ಜಿಲೆಟಿನ್ ಇಷ್ಟೊಂದು ಸುಲಭವಾಗಿ ಹೇಗೆ ಸಿಗ್ತಿದೆ. ವ್ಯವಸ್ಥಿತವಾಗಿ ಸಾಗಾಣಿಕೆ ಮಾಡ್ತಿಲ್ಲ. ಜಿಲ್ಲೆಯ ಕ್ವಾರಿಗಳ ಹಿಂದೆ ಸ್ಥಳೀಯ ಶಾಸಕರು ಇದ್ದಾರೆ. ಪ್ರತಿ ತಿಂಗಳು ಹಫ್ತಾ ವಸೂಲಿ ಮಾಡ್ತಿದ್ದಾರೆ. ಇದನ್ನ ಜನರೇ ಮಾತನಾಡುತ್ತಿದ್ದಾರೆ. ಈ ಘಟನೆ ನಡೆದಿರುವ ಕ್ವಾರಿ ಕೂಡ ಸಚಿವರ ಸಂಬಂಧಿಕರದ್ದಾಗಿದೆ ಎಂದರು.
ಓದಿ:ಕಲ್ಲು ಕ್ವಾರಿ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ: ಬಸವರಾಜ ಬೊಮ್ಮಾಯಿ
ಈ ಘಟನೆಗೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ. ಬೆಳಗಿನ ಜಾವ ಹೋಗಿ ಕೆಲಸ ಮಾಡಿ ಅಂತಾ ನಾವು ಹೇಳಿಲ್ಲ ಎಂದು ಸಿಎಂ ಹೇಳಿದ್ದಾರೆ. ಈ ಹೇಳಿಕೆಅತ್ಯಂತ ಖಂಡನೀಯ. ಕೆಲಸ ಮಾಡಕ್ಕೆ ಆಗಲ್ಲ ಅಂದ್ರೆ ಬಿಟ್ಟು ಹೋಗಿ. ಸಮರ್ಥರು ಬಂದು ಕೆಲಸ ಮಾಡ್ತಾರೆ ಎಂದರು.