ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಜಾಹೀರಾತು ನೀಡಿ ನಂತರ ಮನೆಗಳಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಮಾಲೀಕರು ಇಲ್ಲದಿರುವ ಸಮಯ ನೋಡಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಬಾಂಬೆ ಲೇಡಿ ಗ್ಯಾಂಗ್ ಅನ್ನು ಹೆಣ್ಣೂರು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಮಹಾರಾಷ್ಟ್ರ ಮೂಲದ ವನಿತಾ, ಮಹಾದೇವಿ ಹಾಗೂ ಪ್ರಿಯಾಂಕಾ ಬಂಧಿತ ಕಳ್ಳಿಯರಾಗಿದ್ದು, ಇವರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮೂಲದ ಕಳ್ಳಿಯರು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು, ಜೈಲಿಗೂ ಹೋಗಿ ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಮತ್ತೆ ಹಳೆ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಫೇಸ್ಬುಕ್ ಪ್ಲಾಟ್ಪಾರ್ಮ್:ಕಳೆದ ತಿಂಗಳು ನಗರಕ್ಕೆ ಬಂದಿದ್ದ ಮಹಿಳೆಯರು ಫೇಸ್ ಬುಕ್ ವೊಂದರ ರೆಫರ್ ಹೌಸ್ ಮೇಡ್ಸ್ ಬೆಂಗಳೂರು ಪಬ್ಲಿಕ್ ಗ್ರೂಪ್ ನಲ್ಲಿ ಸುಬ್ಬಲಕ್ಷಿ ಹೆಸರಿನಲ್ಲಿ ಮೊಬೈಲ್ ನಂಬರ್ ಹಾಕಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಆರೋಪಿಗಳ ಪೈಕಿ ಮಹಾದೇವಿ ಪೋಸ್ಟ್ ಹಾಕಿದ್ದಳು. ಇದನ್ನು ನೋಡಿ ಹೆಣ್ಣೂರಿನ ಅರವಿಂದ್ ಎಂಬುವರು ಸಂಪರ್ಕಿಸಿದ್ದರು. ಇದರಂತೆ ಮೂರು ದಿನಗಳ ಕೆಲಸ ಮಾಡಿ ಬಳಿಕ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ನೋಡಿ, ಚಿನ್ನಾಭರಣ ಲಪಾಟಿಯಿಸಿ ಪರಾರಿಯಾಗಿದ್ದರು.