ಬೆಂಗಳೂರು:ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಶಾಪ್ನಲ್ಲಿ ಚಿನ್ನ ಕಳ್ಳತನ ಮಾಡಿ, ಕಾರು ಖರೀದಿಸಿ ಶೋಕಿ ಮಾಡುತ್ತಿದ್ದ ಸೇಲ್ಸ್ ಮ್ಯಾನ್ ಸೇರಿ ಇಬ್ಬರು ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ನಾಯ್ಡು ಹಾಗೂ ವಿಜಯ್ ಬಂಧಿತ ಆರೋಪಿಗಳು. ಇವರಿಂದ 373 ಗ್ರಾಂ ಚಿನ್ನಾಭರಣ, 99 ಸಾವಿರ ನಗದು, ಒಂದು ಕಾರು ಹಾಗೂ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.
ಯಶವಂತಪುರದ ಒಂದನೇ ಮುಖ್ಯರಸ್ತೆಯಲ್ಲಿರುವ ದಿ ಬೆಸ್ಟ್ ಜ್ಯುವೆಲ್ಲರಿ ಶಾಪ್ನಲ್ಲಿ ಚೇತನ್ ನಾಯ್ಡು ನಾಲ್ಕು ವರ್ಷಗಳಿಂದ ಸೆಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಶಾಪ್ನಲ್ಲಿ ಯಾರು ಇಲ್ಲದಿರುವಾಗ ಸಣ್ಣ ಪ್ರಮಾಣದ ಚಿನ್ನ ಕದಿಯುತ್ತಿದ್ದ. ಬಳಿಕ ಮಾರಾಟವಾಗಿದೆ ಎಂದು ಲೆಕ್ಕಪತ್ರದಲ್ಲಿ ನಮೂದಿಸುತ್ತಿದ್ದ. ಕಳೆದ ಒಂದು ವರ್ಷದಿಂದ ಇದೇ ರೀತಿ ಕಳ್ಳತನ ಮಾಡಿಕೊಂಡು ಬರುತ್ತಿದ್ದ.
ಪ್ರಕರಣದ ಕುರಿತು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ಇತ್ತೀಚೆಗೆ ಗ್ರಾಹಕರೊಬ್ಬರು ಚಿನ್ನದ ಸರ ಆರ್ಡರ್ ಮಾಡಿದ್ದರು. ಆದ್ರೆ ಡಿಸ್ ಪ್ಲೇನಲ್ಲಿ ಹಾಕಲಾಗಿದ್ದ ಚಿನ್ನದ ಸರ ಮಾಯವಾಗಿತ್ತು. ಅಂಗಡಿಯಲ್ಲಿ ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅನುಮಾನ ಬಂದ ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಸೇಲ್ಸ್ ಮ್ಯಾನ್ ಚೇತನ್ ನಾಯ್ಡು ಸರ ಕಳ್ಳತನ ಮಾಡಿರುವುದು ಗೊತ್ತಾಗಿತ್ತು.
ಇದನ್ನೂ ಓದಿ:ಬೆಂಗಳೂರು: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ
ಬಳಿಕ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಒಂದು ವರ್ಷದಿಂದ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ. ಅಲ್ಲದೇ ಕದ್ದ ಆಭರಣವನ್ನು ಸ್ನೇಹಿತ ವಿಜಯ್ ಮುಖಾಂತರ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ವಿಜಯ್ನನ್ನೂ ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.