ಬೆಂಗಳೂರು:ಕನ್ನಡ ಚಿತ್ರರಂಗದ ನಟ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ನಿವಾಸದಲ್ಲಿ ಕಳ್ಳತನವಾಗಿದೆ. ನಗರದ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಅವರ ಮನೆಯಲ್ಲಿದ್ದ 5 ಕೆ.ಜಿ ಚಿನ್ನ ಹಾಗೂ 6 ಲಕ್ಷ ರೂಪಾಯಿ ನಗದು ಕಳವು ಆಗಿದೆ.
ಭ್ರಮರೇಶ್ ಅವರು ಕುಟುಂಬ ಸಮೇತರಾಗಿ ಯುರೋಪ್ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಕಳ್ಳರು ತಮ್ಮ ಕೈಚೆಳಕ ತೋರಿಸಿದ್ದಾರೆ. ಟ್ರಿಪ್ ಮುಗಿಸಿಕೊಂಡು ಭಾನುವಾರ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಭ್ರಮರೇಶ್ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಖದೀಮರಿಗಾಗಿ ಬಲೆ ಬೀಸಿದ್ದಾರೆ. ಭ್ರಮರೇಶ್ ಮನೆಯ ಕೆಲಸದವರಿಂದಲೂ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.
ಹುಲಿ ಉಗುರು ಪೆಂಡೆಂಟ್ ಪ್ರಕರಣ: ಇತ್ತೀಚೆಗೆ ಹುಲಿ ಉಗುರು ಪೆಂಡೆಂಟ್ ಪ್ರಕರಣದಲ್ಲಿ ರಾಕ್‌ಲೈನ್ ವೆಂಕಟೇಶ್ ಹೆಸರು ತಳುಕು ಹಾಕಿಕೊಂಡಿತ್ತು. ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಈ ಕೇಸ್ಗೆ ಸಂಬಂಧಿಸಿ ಅರೆಸ್ಟ್ ಮಾಡಿದ ಬೆನ್ನಲ್ಲೇ ನಟ ಜಗ್ಗೇಶ್, ದರ್ಶನ್, ರಾಕ್‌ಲೈನ್ ವೆಂಕಟೇಶ್ ಹಲವರ ವಿರುದ್ಧ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅದರಂತೆ, ಈ ನಟರುಗಳಿಗೆ ನೋಟಿಸ್ ನೀಡಿ ಅವರ ಮನೆಯನ್ನು ಕಳೆದ ಬುಧವಾರ ಪರಿಶೀಲನೆ ನಡೆಸಲಾಗಿತ್ತು. ಇಲಾಖೆಯ ನಾಲ್ಕು ತಂಡಗಳು ಪ್ರತ್ಯೇಕವಾಗಿ ನಟರ ಮನೆಗಳಿಗೆ ತೆರಳಿ, ನೊಟೀಸ್ ನೀಡಿ, ಮನೆ ಶೋಧಿಸಿದ್ದರು.