ಬೆಂಗಳೂರು :ಶಾಸಕ ಎಸ್ ಆರ್ ವಿಶ್ವನಾಥ್ ಅವರ ಬಾಮೈದ ರಾಮಮೂರ್ತಿ ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಮನೆಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಜ್ರ, ನಗದು, ವಾಚ್ಗಳು, ಗೃಹೋಪಯೋಗಿ ವಸ್ತುಗಳು ಕೂಡ ಕಳ್ಳತನವಾಗಿವೆ ಎಂದು ಯಲಹಂಕ ಠಾಣೆಗೆ ರಾಮಮೂರ್ತಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪ್ರತಿಷ್ಠಿತ ಬಡವಾಣೆಗಳಲ್ಲೊಂದಾಗಿರುವ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿ ಈ ದೊಡ್ಡ ಮಟ್ಟದ ಕಳ್ಳತನವಾಗಿದೆ. ಬಿಬಿಎಂಪಿ ಗುತ್ತಿಗೆದಾರ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಬಾಮೈದುನ ಆಗಿರುವ ರಾಮಮೂರ್ತಿಯವರು ಮೂರು ದಿನಗಳ ಹಿಂದೆ ಕೆಲಸದ ವಿಚಾರವಾಗಿ ಬೇರೆಡೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಬೆಲೆ ಬಾಳುವ ವಾಚ್ಗಳೊಂದಿಗೆ ಮನೆಯ ವಸ್ತುಗಳನ್ನ ಕದ್ದು ಪರಾರಾರಿಯಾಗಿದ್ದಾರೆ.
ಇನ್ನು ಬೆಂಗಳೂರಿಗೆ ವಾಪಸ್ ಬಂದು ನೋಡಿದಾಗ ರಾಮಮೂರ್ತಿ ಅವರಿಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಕಳ್ಳತನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿಗಳ ಹಿಂದೆ ಬಿದ್ದಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ:ಗ್ರಾಹಕರ ಸೋಗಿನಲ್ಲಿ ಬಂದು ಬೆಲೆಬಾಳುವ ಸೀರೆ ಕದ್ದೊಯ್ದ ಕಳ್ಳಿಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!
ಕಳ್ಳನೊಂದಿಗೆ ಶಾಮೀಲಾಗಿದ್ದ ರೈಲ್ವೆ ಹೆಡ್ಕಾನ್ಸ್ಟೇಬಲ್ ಅರೆಸ್ಟ್:ಬೇಲಿಯೇ ಎದ್ದು ಹೊಲ ಮೇಯ್ದಂತೆ ಖದೀಮರನ್ನು ಸದೆಬಡಿಯಬೇಕಾದ ರೈಲ್ವೆ ಹೆಡ್ಕಾನ್ಸ್ಟೇಬಲ್ ಬಬ್ಬರನ್ನು ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನವೆಸಗುತ್ತಿದ್ದ ಜಾಲದೊಂದಿಗೆ ಬಂಧಿಸಿದ್ದಾರೆ. ಬೆಂಗಳೂರು ದಂಡು ರೈಲ್ವೆ ಪೊಲೀಸರು ಈ ಪ್ರಕರಣ ಪತ್ತೆ ಹಚ್ಚಿದ್ದಾರೆ. ಚಿಕ್ಕಬಳ್ಳಾಪುರ ರೈಲ್ವೆ ಹೊರ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿರುವ ಸಿದ್ದರಾಮರೆಡ್ಡಿ ಹಾಗೂ ಖದೀಮ ಸಾಬಣ್ಣ ಎಂಬುವರನ್ನ ಬಂಧಿಸಿ, ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. 2011ರ ಬ್ಯಾಚ್ ಸಿಬ್ಬಂದಿಯಾಗಿದ್ದ ಸಿದ್ದರಾಮರೆಡ್ಡಿ, ರೈಲ್ವೆ ಹೆಡ್ಕಾನ್ಸ್ಟೇಬಲ್ ಆಗಿ ರಾಯಚೂರಿನಲ್ಲಿ ಸೇವೆಗೆ ಸೇರಿದ್ದರು. ಸಾಬಣ್ಣ ಸಹ ರಾಯಚೂರು ಮೂಲದವನಾಗಿದ್ದು, ಇಬ್ಬರ ನಡುವೆ ಪರಿಚಯವಾಗಿತ್ತು. ಕಾಲ ಕ್ರಮೇಣ ಹೆಡ್ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದು ಸಿದ್ದರಾಮ ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದ. ಮತ್ತೊಂದೆಡೆ ಸಾಬಣ್ಣ ಬೆಂಗಳೂರಿನ ಚಿಕ್ಕಬಾಣವಾರ ಬಳಿ ಮನೆ ಮಾಡಿಕೊಂಡಿದ್ದ. ಈ ಮಧ್ಯೆ ಇಬ್ಬರ ನಡುವೆ ಸಂಪರ್ಕ ಬೆಳೆದಿತ್ತು. (ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ರೈಲ್ವೆ ಹೆಡ್ಕಾನ್ಸ್ಟೇಬಲ್ ಅರೆಸ್ಟ್)