ಬೆಂಗಳೂರು: ಈತ ಫೀಲ್ಡಿಗಿಳಿದ್ರೆ ಸಾಕು. ಒಂದೋ ದೇವಸ್ಥಾನದ ಹುಂಡಿ ಕಳ್ಳತನ, ಇಲ್ಲವಾದರೆ ಬಸ್ನಲ್ಲಿ ಪ್ರಯಾಣಿಕರ ಚಿನ್ನಾಭರಣ ಎಗರಿಸುವುದು ಫಿಕ್ಸ್. ಕಳ್ಳತನದಲ್ಲಿ ಪಂಟರ್ ಆಗಿದ್ದ ಆರೋಪಿಯನ್ನು ಉಪ್ಪಾರ ಪೇಟೆ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿದ್ದಿಕ್ ಅಲಿಯಾಸ್ ಕುಣಿಗಲ್ ಸಿದ್ದಿಕ್ ಬಂಧಿತ ಆರೋಪಿ. ದೇವಸ್ಥಾನಕ್ಕೆ ಭಕ್ತನಂತೆ ಬಂದು ಅಲ್ಲಿದ್ದ ಹುಂಡಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನ ವಿಚಾರಣೆ ನಡೆಸಿದಾಗ ಈತ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಹಿಂಬಾಲಿಸಿ ಅವರ ಚಿನ್ನಾಭರಣ ಕದಿಯುತ್ತಿದ್ದ ವಿಚಾರ ಕೂಡ ಬಯಲಾಗಿದೆ. ಸದ್ಯ ಬಂಧಿತನಿಂದ 3 ಲಕ್ಷ 75 ಸಾವಿರ ಮೌಲ್ಯದ 77 ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.