ಬೆಂಗಳೂರು: ಸಾರ್ವಜನಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಗ್ಯಾಂಗ್ಅನ್ನು ಹೆಡೆಮುರಿ ಕಟ್ಟುವಲ್ಲಿ ದಕ್ಷಿಣ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಬೆದರಿಕೆ, ದರೋಡೆ: ಆರೋಪಿಗಳು ಅಂದರ್
ಸಾರ್ವಜನಿಕರಿಗೆ ಬೆದರಿಕೆಯೊಡ್ಡಿ ದರೋಡೆ ಮಾಡುತ್ತಿದ್ದ 6 ಮಂದಿಯನ್ನು ಬಂಧಿಸುವಲ್ಲಿ ದಕ್ಷಿಣ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಸತೀಶ್ ಅಲಿಯಾಸ್ ಸತ್ಯ, ನಾಗೇಂದ್ರ ಅಲಿಯಾಸ್ ದೇವಿ, ವೆಂಕಟೇಶ್ ಗೌಡ, ಗಂಗಾಧರ್, ಜಯಂತಗೌಡ, ಲೋಕೇಶ್ ಬಂಧಿತ ಆರೋಪಿಗಳು. ನಗರದ ಕುಮಾರಸ್ವಾಮಿ ಲೇಔಟ್, ಬನಶಂಕರಿ, ಪುಟ್ಟೇನಹಳ್ಳಿ, ಜೆ.ಪಿ ನಗರ ಮತ್ತು ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಾಟಾ ಇಂಡಿಕಾ ಕಾರು ಮತ್ತು ಆಟೋದಲ್ಲಿ ಬಂದು ತಮ್ಮ ಕರಾಮತ್ತು ತೋರಿಸುತ್ತಿದ್ದರು.
ಈ ಮಾಹಿತಿ ತಿಳಿದ ಸುಬ್ರಹ್ಮಣ್ಯ ಉಪ ವಿಭಾಗ ಕುಮಾರಸ್ವಾಮಿ ಲೇಔಟ್ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಕುಮಾರಸ್ವಾಮಿ ಲೇಔಟ್, ಬನಶಂಕರಿ ಪೊಲೀಸ್ ಠಾಣೆ, ಜೆ.ಪಿ ನಗರ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿದ್ದು, ಬಂಧಿತ ಆರೋಪಿಗಳಿಂದ ಒಟ್ಟು 8 ಲಕ್ಷ ರೂ. ಬೆಲೆ ಬಾಳುವ ಚಿನ್ನ ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸಿದ ಆಯುಧ, ಟಾಟಾ ಇಂಡಿಕಾ ಕಾರು ವಶಪಡಿಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಕೆಲಸ-ಹಣ ಇಲ್ಲದೆ ಪರದಾಟ ನಡೆಸುತ್ತಿದ್ದು, ಹಣ ಗಳಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.