ಬೆಂಗಳೂರು: ಸಿಲಿಕಾನ್ ಸಿಟಿಯ ಬ್ರ್ಯಾಂಡೆಡ್ ಬಟ್ಟೆ ಅಂಗಡಿಯಲ್ಲಿ ಖದೀಮರು ಬ್ರ್ಯಾಂಡೆಡ್ ಬಟ್ಟೆ ಕದ್ದು ಪರಾರಿಯಾಗಿದ್ದು, ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋದಲ್ಲಿ ಬಂದ ಇಬ್ಬರು ಮೊದಲಿಗೆ ಬಟ್ಟೆ ಶೋ ರೂಂ ಪಕ್ಕದ ರಸ್ತೆಯಲ್ಲಿ ಗಾಡಿ ಪಾರ್ಕ್ ಮಾಡುತ್ತಾರೆ. ಆಟೋದಿಂದ ಇಳಿದ ಮತ್ತೊಬ್ಬ ಕೈಯಲ್ಲಿ ಚೀಲ ಹಾಗೂ ಕಬ್ಬಿಣದ ರಾಡ್ ಹಿಡಿದು ಬಟ್ಟೆ ಶೋ ರೂಂ ಬಳಿ ಎಂಟ್ರಿ ಕೊಡ್ತಾನೆ. ಕೈನಲ್ಲಿದ್ದ ಕಬ್ಬಿಣದ ರಾಡ್ನಿಂದ ಶೆಟರ್ ಮುರಿದು ಬಟ್ಟೆ ಶಾಪ್ ಒಳಗೆ ಓರ್ವ ಎಂಟ್ರಿಯಾಗುತ್ತಾನೆ.
ಬಟ್ಟೆ ಶೋ ರೂಂಗೆ ಕಳ್ಳ ಎಂಟ್ರಿಯಾಗುತ್ತಿದ್ದಂತೆ ತನ್ನ ಮೊಬೈಲ್ ಟಾರ್ಚ್ ಆನ್ ಮಾಡಿದ್ದಾನೆ. ರೇಮಂಡ್ಸ್, ಜಾಕಿ ಸೇರಿ ವಿವಿಧ ಬ್ರ್ಯಾಂಡ್ನ ಸುಮಾರು 80 ಸಾವಿರ ಬೆಲೆಬಾಳುವ ಬಟ್ಟೆಗಳನ್ನು ಆರೋಪಿ ಸೆಲೆಕ್ಟ್ ಮಾಡಿದ್ದಾನೆ. ನಂತರ ಕ್ಯಾಶ್ ಬಾಕ್ಸ್ನಲ್ಲಿದ್ದ ಸುಮಾರು 17 ಸಾವಿರ ರೂ. ಹಣ ಎಗರಿಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ಗುರುತು ಪತ್ತೆಯಾಗಬಾರದು ಎಂದು ವಾಪಸ್ ಬರುವ ವೇಳೆ ಬಟ್ಟೆ ಅಂಗಡಿ ಒಳಗಿನ ಸಿಸಿಟಿವಿಗಳನ್ನು ಡ್ಯಾಮೇಜ್ ಮಾಡಲು ಯತ್ನಿಸಿದ್ದಾನೆ.