ಬೆಂಗಳೂರು: ವಿಶ್ವವೇ 370 ವಿಧಿ ರದ್ಧತಿ ನಿರ್ಧಾರದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದ್ದು, ಪಾಕಿಸ್ತಾನ ಈ ವಿಚಾರವಾಗಿ ಈಗ ಏಕಾಂಗಿಯಾಗಿದೆಯೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನ ಒಂದು ದೇಶ ಒಂದು ಸಂವಿಧಾನ, 370ನೇ ವಿಧಿ ರದ್ದತಿ ಬಗ್ಗೆ ಜನ ಜಾಗರಣ ಸಭೆ ಉದ್ದೇಶಿಸಿ ಮಾತನಾಡಿದ ನಡ್ಡಾ, ಈಗ ದೇಶ ಬದಲಾಗಿದ್ದು, ವಿಶ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಮ್ಮು ಕಾಶ್ಮೀರದ ಸಂಬಂಧ ಈ ನಿರ್ಧಾರ ದೂರಗಾಮಿಯಾಗಲಿದೆಯೆಂದು ವಿವರಿಸಿದರು.
370ನೇ ವಿಧಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುತ್ತೆ ಅನ್ನೋ ಸುಳ್ಳನ್ನು ಹಬ್ಬಿಸಲಾಗಿತ್ತು. ಇದೊಂದು ಐತಿಹಾಸಿಕ ಸುಳ್ಳಾಗಿದ್ದು, ತಾತ್ಕಾಲಿಕವಾಗಿ ಮಾತ್ರ ವಿಶೇಷ ಸ್ಥಾನಮಾನ ಕಾಶ್ಮೀರಕ್ಕೆ ಕೊಡಲಾಗಿತ್ತು. ಈ ಸ್ಥಾನಮಾನವನ್ನು ಬದಲಿಸಬಹುದಾಗಿತ್ತು. ಆದರೆ, ಈವರೆಗೆ ಆ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿರಲಿಲ್ಲವೆಂದು ಆರೋಪಿಸಿದರು. ಜೊತೆಗೆ, 370ನೇ ವಿಧಿ ಭಾರತದ ಸಂವಿಧಾನದ ವಿರುದ್ಧವಾಗಿತ್ತು. ಇದರಿಂದ ನಮ್ಮ ನೆಲದ 104 ಕಾನೂನುಗಳು ಜಮ್ಮು-ಕಾಶ್ಮೀರದಲ್ಲಿ ಅನ್ವಯವಾಗುತ್ತಿರಲಿಲ್ಲ. ಈಗ ವಿಧಿ ರದ್ಧತಿಯಾದ ಬಳಿಕ ಎಲ್ಲ ಕಾನೂನು ಅನ್ವಯವಾಗಲಿದೆ. ಯಾರು ಬೇಕದಾರೂ ಚುನಾವಣೆಗೆ ನಿಲ್ಲಬಹುದಾಗಿದೆಯೆಂದು ತಿಳಿಸಿದರು.