ಬೆಂಗಳೂರು:ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಷಯದ ಮೇಲಿನ ಚರ್ಚೆ ವೇಳೆ ರಾಜ್ಯಸಭೆಯ ಮಾಜಿ ಸದಸ್ಯರಿಬ್ಬರು ಪರಿಷತ್ನಲ್ಲಿ ಪರಸ್ಪರ ದೆಹಲಿ ಗುಂಗಿನ ಬಗ್ಗೆ ಮಾತನಾಡಿ ರಾಷ್ಟ್ರೀಯ ನಾಯಕರ ಬಗ್ಗೆ ಪ್ರಸ್ತಾಪಿಸಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಸದನ ಒಪ್ಪದ ಪದ ಬಳಸಿದ ಪ್ರಸಂಗ ನಡೆಯಿತು. ನಂತರ ಆ ಪದವನ್ನು ಕಡತದಿಂದ ತೆಗೆದು ರೂಲಿಂಗ್ ನೀಡಿಲಾಯಿತು.
ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್, ಕೋರ್ಟ್ನಲ್ಲಿ ವಿವಾದ ಇರುವಾಗ ಇಲ್ಲಿ ಅದನ್ನು ಹೇಗೆ ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯ? ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣದ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಹಮತ ವ್ಯಕ್ತಪಡಿಸಿದರು. ನಾವೇ ನಿಯಮ ಮಾಡಿಕೊಂಡಿದ್ದೇವೆ ಎಂದರು.
ಆದರೆ ಇದಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ಮಂಡಿಸಿದಾಗಲೇ ಆಕ್ಷೇಪಣೆ ಮಾಡಬೇಕಿತ್ತು. ಚರ್ಚೆ ಅರ್ಧ ನಡೆದ ನಂತರ ಆಕ್ಷೇಪಣೆ ಸಲ್ಲದು, ಮೊದಲೇ ಏಕೆ ಪಾಯಿಂಟ್ ಆಫ್ ಆರ್ಡರ್ ರೈಸ್ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಮಧ್ಯದಲ್ಲಿ ಆಕ್ಷೇಪಣೆ ಮಾಡಬಾರದು ಎನ್ನುವುದೇನಿಲ್ಲ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಎಜಿ ಜೊತೆ, ತಜ್ಞರ ಜೊತೆ ಚರ್ಚಿಸಿಯೇ ಬಿಲ್ ತರಲಾಗಿದೆ. ಯಾವುದೇ ತೊಂದರೆ ಇಲ್ಲ. ವಿಧಾನಸಭೆಯಲ್ಲಿ ಎರಡು ದಿನ ಚರ್ಚೆ ಆಗಿದೆ. ಇಲ್ಲಿ ಬಂದಾಗ ಕಲಾಪ ಮುಂದೂಡಿಕೆಯಾಯ್ತು. ನಿನ್ನೆಯೂ ಬಂತು. ಆದರೆ ಚರ್ಚೆ ಬಿಟ್ಟು ಹೊರಟುಬಿಟ್ಟಿರಿ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: 2021ರಲ್ಲಿ ಜಿಯೋ 5ಜಿ ಸೇವೆ ಪ್ರಾರಂಭಿಸುವ ಯೋಜನೆ: ಮುಖೇಶ್ ಅಂಬಾನಿ
ನಂತರ ಮಾತು ಮುಂದುವರೆಸಿದ ಹರಿಪ್ರಸಾದ್, ಬ್ರಿಟಿಷರು ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದರು. ಬಲವಂತವಾಗಿ ಸ್ವಾಧೀನ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದರು. ಇದನ್ನು ತಿದ್ದುಪಡಿ ಮಾಡಿ ಉಳುವವನೇ ಒಡೆಯ ಎಂದು ಕಾಯ್ದೆ ರೂಪಿಸಲಾಗಿತ್ತು. ರಕ್ತರಹಿತ ಕ್ರಾಂತಿ ಅರಸು ಕಾಲದಲ್ಲಿ ಆಯಿತು. ಈಗ ಅಂತಹ ಕಾಯ್ದೆಯನ್ನು ಮತ್ತೆ ರೈತರಿಗೆ ಅನ್ಯಾಯವಾಗುವ ರೀತಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಯೋ ಬಂದು ಬಿಎಸ್ಎನ್ಎಲ್ ಮುಳುಗಿತು:
ಮೊದಲು ಫ್ರೀಯಾಗಿ ಜಿಯೋ ಸಿಮ್ ಕೊಟ್ಟರು. ಅದರಿಂದ ಬಿಎಸ್ಎನ್ಎಲ್ ಮುಳುಗಿ ಹೋಯಿತು. ಮೂರು ತಿಂಗಳ ನಂತರ ದುಡ್ಡು ಕಟ್ಟಿರಿ ಎಂದರು. ಅದೇ ರೀತಿ ಈಗ ಭೂಮಿ ಖರೀದಿಗೆ 25 ಲಕ್ಷ ವಾರ್ಷಿಕ ಆದಾಯ ಇರಬೇಕು ಎಂದು ನಿಗದಿ ಮಾಡಿದ್ದೀರಿ. ಇದನ್ನು ವಾಪಸ್ ಪಡೆದಾಗ ರೈತರ ಬಳಿ ಭೂಮಿ ಉಳಿಯಲು ಸಾಧ್ಯವಾಗುತ್ತಾ? ಮೊದಲು ಜಮೀನ್ದಾರಿ ಪದ್ಧತಿ ವ್ಯವಸ್ಥೆ ಇತ್ತು. ಮತ್ತೆ ಅದೇ ಹಳೇ ಪದ್ಧತಿಗೆ ವಾಪಸ್ ಕೊಂಡೊಯ್ಯುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಜಮೀನನ್ನು ವಶಕ್ಕೆ ಪಡೆಯಲಿವೆ. ಯಾವ ಬೆಳೆ ಬೆಳಯಬೇಕು ಎಂದು ಸಂಸ್ಥೆ ನಿಯಂತ್ರಣ ಮಾಡಲಿದೆ. ರೈತ ಕೂಲಿಗಾರನಾಗಿ ಕೆಲಸ ಮಾಡಬೇಕಾಗಲಿದೆ ಎಂದು ಹರಿಪ್ರಸಾದ್ ಹೇಳಿದರು.
ಯಡಿಯೂರಪ್ಪ ಸಿಎಂ ಆದಾಗಲೆಲ್ಲಾ ರೈತರಿಗೆ ಸಂಕಷ್ಟ ಬರಲಿದೆ. ಮೊದಲ ಬಾರಿ ಸಿಎಂ ಆದಾಗ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ನಡೆದ ಗಲಾಟೆಯಲ್ಲಿ ಫೈರಿಂಗ್ ನಡೆದು ಆರು ಜನ ಮೃತಪಟ್ಟರು. ಆರು ಜನ ಸತ್ತಿಲ್ಲ ಎಂದರೆ ನಾನು ರಾಜಕೀಯ ಬಿಟ್ಟುಬಿಡುತ್ತೇನೆ ಎಂದು ಸವಾಲೆಸೆದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಹರಿಪ್ರಶದ್ ಕೂಡ ನನ್ನ ಹಾಗೆಯೇ ಇಲ್ಲಿಗೆ ಬಂದಿದ್ದಾರೆ. ಆದರೆ ದೆಹಲಿ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಅಲ್ಲಿ ಮಾತನಾಡಬೇಕಾಗಿದ್ದನ್ನು ಇಲ್ಲಿ ಮಾತನಾಡುತ್ತಿದ್ದಾರೆ. ಅದನ್ನೆಲ್ಲಾ ನಿಮ್ಮ ನಾಯಕರಲ್ಲಿ ಹೇಳಿ. ಇದು ಆ ಸ್ಥಳ ಅಲ್ಲ, ರಾಜ್ಯದ ಬಗ್ಗೆ ಮಾತನಾಡಿ. ಎಲ್ಲಾ ತಂದು ಸರಿಯಬೇಡಿ. ಸೀಮಿತವಾಗಿ ಮಾತನಾಡಿದರೆ ಕೇಳಲು ಸಿದ್ಧ. ನೀವು ಮೋದಿ ಏನು ಮಾಡಿದರು ಅಂತಾ ಮಾತನಾಡಲು ಹೋದರೆ ನಾವು ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತೇವೆ ಎಂದರು.
ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ನಾವು ಒಕ್ಕೂಟದಲ್ಲಿದ್ದೇವೆ. ವಿರೋಧ ಪಕ್ಷದವರು ಇಲ್ಲದಾಗ ಕಾನೂನು ತಂದಿದ್ದೀರಿ. ಈಗಲೂ ಸದನ ಕರೆಯಿರಿ ಮಾತನಾಡಲು ಸಿದ್ಧರಿದ್ದೇವೆ. ಇಲ್ಲಿ ಮಾತನಾಡಬೇಡಿ ಎಂದರೆ ಹೇಗೆ? ಈ ಸದನವನ್ನು ಅಂತಹ ಸ್ಥಳ ಅಲ್ಲ ಅನ್ನುತ್ತಿದ್ದೀರಲ್ಲ. ನಿಮ್ಮ ಪ್ರಧಾನಿ ಸಂಸತ್ತನ್ನೇ ಅಂತಹ ಸ್ಥಳ ಮಾಡಿದ್ದಾರಲ್ಲ. ಅದಕ್ಕೆ ಏನು ಹೇಳುತ್ತೀರಿ ಎಂದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾದ-ಪ್ರತಿವಾದ ನಡೆಯಿತು. ಗದ್ದಲದ ವಾತಾವರಣ ನಿರ್ಮಾಣವಾಯಿತು. ನಂತರ ಸಭಾಪತಿ ಪೀಠದಲ್ಲಿದ್ದ ಮರಿತಿಬ್ಬೇಗೌಡ ಸದನವನ್ನು ಹೋಲಿಕೆ ಮಾಡಿ ಆಯನೂರು ಮಂಜುನಾಥ್ ಮತ್ತು ಹರಿಪ್ರಸಾ್ ಬಳಸಿದ್ದ ಒಂದು ಪದವನ್ನು ಕಡತದಿಂದ ತೆಗೆದುಹಾಕಿ ರೂಲಿಂಗ್ ನೀಡಿದರು.