ಕರ್ನಾಟಕ

karnataka

ETV Bharat / state

ಬೆಂಗಳೂರು: ಇನ್ಸ್​ಪೆಕ್ಟರ್​​​ ವಿರುದ್ಧವೇ ದೂರು ನೀಡಿದ ಪತ್ನಿ

ಇನ್​ಸ್ಪೆಕ್ಟರ್​ ವಿರುದ್ಧವೇ ಪತ್ನಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್​ಸ್ಪೆಕ್ಟರ್ ವಿರುದ್ಧವೇ ದೂರು ನೀಡಿದ ಪತ್ನಿ
ಇನ್​ಸ್ಪೆಕ್ಟರ್ ವಿರುದ್ಧವೇ ದೂರು ನೀಡಿದ ಪತ್ನಿ

By ETV Bharat Karnataka Team

Published : Sep 6, 2023, 10:20 PM IST

Updated : Sep 6, 2023, 10:43 PM IST

ಬೆಂಗಳೂರು : ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್​ಸ್ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ಧ ಪತ್ನಿಯೇ ಯಶವಂತಪುರ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಇನ್​ಸ್ಪೆಕ್ಟರ್ ಮಲ್ಲಿಕಾರ್ಜುನ ಸೇರಿ ಒಟ್ಟು ನಾಲ್ವರ ವಿರುದ್ಧ ವಂಚನೆ ಹಾಗೂ ವರದಕ್ಷಿಣೆಯಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಇರುವುದೇನು?:ದೂರುದಾರ ಮಹಿಳೆ ದೂರಿನಲ್ಲಿ ಹೇಳಿರುವ ಪ್ರಕಾರ, ನಾನು ಹಾಗೂ ಮಲ್ಲಿಕಾರ್ಜುನ್ ಇಬ್ಬರು 2012ರಲ್ಲಿ ಮದುವೆ ಮಾಡಿಕೊಂಡಿದ್ದೆವು. ವಿವಾಹದ ವೇಳೆ 8 ಲಕ್ಷ‌ ನಗದು, 250 ಗ್ರಾಂ ಚಿನ್ನ ಹಾಗೂ 5 ಕೆ.ಜಿ ಬೆಳ್ಳಿ ನೀಡಿ ನಮ್ಮ ತಂದೆ ತಾಯಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆರಂಭದಲ್ಲಿ ದಾಂಪತ್ಯ ಅನ್ಯೋನ್ಯವಾಗಿಯೇ ಇತ್ತು. ಅನಂತರ ಹಣಕ್ಕಾಗಿ ಪತಿ ಮಲ್ಲಿಕಾರ್ಜುನ್ ಪೀಡಿಸಲು ಆರಂಭಿಸಿದರು . ಇವರಿಗೆ ಸಹೋದರ ಬಸಪ್ಪ, ಅತ್ತಿಗೆ ಶಿವಮ್ಮ ಸಾಥ್ ನೀಡುತ್ತಿದ್ದರು. ಒಂದು ವರ್ಷ ತುಂಬುವಷ್ಟರಲ್ಲೆ ಗರ್ಭ ಧರಿಸಿದ್ದ ತಮಗೆ ಅಬಾರ್ಷನ್‌‌ ಮಾಡಿಸುವಂತೆ ಒತ್ತಡ ಹೇರಿ, ಪತಿ ಕಿರುಕುಳ ನೀಡಿದ್ದ. ಅಷ್ಟರ ನಡುವೆಯೂ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೆ ಎಂದು ದೂರುದಾರೆ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಮುಂದುವರೆದು ವಿವರಿಸಿರುವ ಅವರು, ಬಾಣಂತನಕ್ಕಾಗಿ‌ ತವರು ಮನೆ ಸೇರಿದ ಬಳಿಕ ಪತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧ ಬೆಸೆದುಕೊಂಡಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ತಾವು ಪೊಲೀಸ್‌ ಠಾಣೆಗೆ ಬಂದು ದೂರು ನೀಡಬೇಕಾಯಿತು. ಈ ಹಿಂದೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಸಬ್​ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುವಾಗ ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೂ ತಮ್ಮ ಪತಿ ಸಲುಗೆ ಬೆಳೆಸಿಕೊಂಡಿದ್ದ ಎಂದು ತಮ್ಮ ದೂರಿನಲ್ಲಿ ಅವರು ಆರೋಪಿಸಿದ್ದಾರೆ. ಈ ನಡುವೆ ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ವಿರುದ್ಧ ಯಶವಂತಪುರ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ಸ್​ಪೆಕ್ಟರ್​ ಹೇಳೋದೇನು ? : ವಂಚನೆ ಹಾಗೂ ವರದಕ್ಷಿಣೆ ಪಡೆದ‌ ಆರೋಪ ಎದುರಿಸುತ್ತಿರುವ ಇನ್ಸ್​ಪೆಕ್ಟರ್​ ಮಲ್ಲಿಕಾರ್ಜುನ್ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ್ದು, 'ನನ್ನ ಮೇಲೆ ಬಂದಿರುವ ಆರೋಪಗಳೆಲ್ಲವೂ ಸುಳ್ಳಾಗಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನಿಂದ ಪತ್ನಿ ದೂರವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2018ರಲ್ಲಿ ಆಕೆಯಿಂದ ವಿಚ್ಚೇದನ ಪಡೆದಿದ್ದೇನೆ. ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಆರೋಪಿಸುವ ಮೂಲಕ ತನ್ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗಿದೆ. ವಿಚ್ಚೇದನ ಪಡೆದು ಐದು ವರ್ಷಗಳ ಬಳಿಕ ಇದೀಗ ತನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಆಕೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ' ಎಂದಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಆರೋಪ: ಪೊಲೀಸ್​ ಗಂಡನ ವಿರುದ್ಧ ಎಸ್​ಪಿಗೆ ದೂರು ಸಲ್ಲಿಸಿದ ಗೃಹಿಣಿ: ತನಿಖೆಗೆ ಆದೇಶಿಸಿದ ಪೊಲೀಸ್​​ ವರಿಷ್ಠಾಧಿಕಾರಿ

Last Updated : Sep 6, 2023, 10:43 PM IST

ABOUT THE AUTHOR

...view details