ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ವಿಚಾರಣಾ ನ್ಯಾಯಾಲಯಗಳಿಗೆ ತಾಕೀತು ಮಾಡಿದೆ. ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಒಮ್ಮೆ ವಿಚಾರಣಾ ನ್ಯಾಯಾಲಯ (ಜೆಎಂಎಫ್‌ಸಿ) ಜೀವನಾಂಶ ನೀಡುವ ಬಗ್ಗೆ ಸಾಕ್ಷ್ಯಾಧಾರ ಪರಗಿಣಿಸಿ ಆದೇಶ ಪ್ರಕಟಿಸಿದಾಗ, ಪತ್ನಿ ಸ್ವತಃ ಜೀವನ ನಿರ್ವಹಣೆ ಮಾಡಲು ಸಮರ್ಥಳು ಆಗಿದ್ದಾಳೆ ಎಂಬುದು ಸಾಬೀತಾದರೆ ಜೀವನಾಂಶ ನೀಡಲು ಸೂಚಿಸಿ ಹೊರಡಿಸಿದ್ದ ಆದೇಶವನ್ನು ಮೇಲ್ಮನವಿ ನ್ಯಾಯಾಲಯವು (ಸೆಷನ್ಸ್) ತಿದ್ದುಪಡಿ ಮಾಡಬಹುದು ಇಲ್ಲವೇ ರದ್ದುಪಡಿಸಬಹುದು. ಆದರೆ, ಮದುವೆಯ ಸಿಂಧುತ್ವದ ಬಗ್ಗೆ ಯಾವುದೇ ಆದೇಶ ಪ್ರಕಟಿಸಿದರೆ, ಅದು ತನ್ನ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಂತಾಗುತ್ತದೆ. ಅದರಂತೆ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಅಧಿಕಾರ ವ್ಯಾಪ್ತಿ ಮೀರಿ ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸಿ, ಜೀವನಾಂಶ ಪಾವತಿ ಕುರಿತಂತೆ ವಿಚಾರಣಾ ನ್ಯಾಯಾಲಯ ಆದೇಶ ಹೊರಡಿಸಿದೆ. ಇದು ರದ್ದುಪಡಿಸಲು ಅರ್ಹವಾಗಿದೆ ಎಂದು ನಿರ್ಧರಿಸಿತು.
ಈ ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆ ಮತ್ತು ಇತರೆ ಸಾಕ್ಷ್ಯಧಾರ ಪರಿಗಣಿಸಿದರೆ ಪತ್ನಿ, ಪತಿಯನ್ನು ಮದುವೆಯಾಗಿರುವುದು ಸ್ಪಷ್ಟವಾಗುತ್ತದೆ. ಮದುವೆ ಸಿಂಧುತ್ವದ ಬಗ್ಗೆ ಅರ್ಜಿ ಸಲ್ಲಿಸಿದ್ದರೆ ಮಾತ್ರ ಆ ಕುರಿತು ಸೆಷನ್ಸ್ ನ್ಯಾಯಾಲಯವು ಪರಿಶೀಲನೆ ನಡೆಸಿ, ಆದೇಶ ಹೊರಡಿಸಬೇಕಾಗುತ್ತದೆ. ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆ ಸಿಂಧುತ್ವದ ಬಗ್ಗೆ ಪರಿಶೀಲನೆ ನಡೆಸುವಂತಿಲ್ಲ. ಪತಿಯಿಂದ ಪತ್ನಿ ಜೀವನಾಂಶ ಪಡೆಯಲು ಅರ್ಹರಾಗಿದ್ದಾರೆಯೇ ಎಂಬುದರ ಕುರಿತು ಆಕೆಯ ಸಾಕ್ಷ್ಯವನ್ನು ಪರಿಶೀಲನೆ ಮಾಡುವ ಮೇಲ್ಮನವಿ (ಸೆಷನ್ಸ್) ಕೋರ್ಟ್‌ಗೆ ನಡೆಸಲು ಅವಕಾಶವಿರುತ್ತದೆ ಎಂದು ಪೀಠ ತಿಳಿಸಿದೆ.