ಕರ್ನಾಟಕ

karnataka

ಡ್ರಗ್ಸ್ ದಂಧೆ ಪ್ರಕರಣದ ತನಿಖೆಯಲ್ಲಿ ಗುಪ್ತಚರ ಪೊಲೀಸರ ಬಳಕೆ: ಬೊಮ್ಮಾಯಿ

By

Published : Sep 13, 2020, 1:57 PM IST

ಸಿಸಿಬಿಗೆ ಅನೇಕ ಪ್ರಕರಣಗಳ ಭಾರ ಬಿದ್ದಿದ್ದರಿಂದ ಅದರ ವ್ಯಾಪ್ತಿಯನ್ನು ಇನ್ನಷ್ಟು ಬಲಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆ ಪ್ರಕರಣದ ತನಿಖೆಯಲ್ಲಿ ಗುಪ್ತಚರ ಇಲಾಖೆಯ ಪೊಲೀಸರ ಬಳಕೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಸಿಸಿಬಿಯನ್ನು ಮತ್ತಷ್ಟು ಬಲಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್​​ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಪ್ರಕರಣಗಳ ಭಾರ ಸಿಸಿಬಿಗೆ ಬಿದ್ದಿದೆ. ಹಾಗಾಗಿ ಅದರ ವ್ಯಾಪ್ತಿಯನ್ನು, ಇನ್ನಷ್ಟು ಬಲಗೊಳಿಸಬೇಕಿದೆ. ಅದಕ್ಕೆ ಇನ್ನಷ್ಟು ಅಧಿಕಾರಿಗಳನ್ನು ನಿಯೋಜಿಸಬೇಕು, ಎಲ್ಲಾ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಬೇಕು ಎನ್ನುವ ತೀರ್ಮಾನವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನೆಲ್ಲಾ ಮಾಡಲಾಗುತ್ತದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಎನ್‌ಡಿಪಿಎಸ್ ಕಾಯ್ದೆ ಕೇಂದ್ರದ್ದು. ಆದರೆ ಅದರ ಅನುಷ್ಠಾನಕ್ಕೆ ನಿಯಮ ಮಾಡುವುದು ರಾಜ್ಯ ಸರ್ಕಾರದ ಅಧಿಕಾರ. ಹಾಗಾಗಿ ಕಾಯ್ದೆ ಅನುಷ್ಠಾನದಲ್ಲಿನ ತೊಂದರೆಯನ್ನು ನಿವಾರಿಸುವುದು, ಯಾವ ರೀತಿ ನಿಯಮದಲ್ಲಿ ಬದಲಾವಣೆ ತರಬೇಕು ಎನ್ನುವ ಕುರಿತು ಮುಂದಿನ ವಾರದಲ್ಲಿ ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನಿರ್ದಿಷ್ಟವಾದ ನಿಯಮಗಳನ್ನು ತಂದು ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಡ್ರಗ್ಸ್​ಗೆ ಯುವಪೀಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸಮಾಜ ಕೂಡ ಜಾಗೃತವಾಗಿರಬೇಕು. ಹಾಗಾಗಿ ಎಲ್ಲರ ಸಲಹೆ-ಸೂಚನೆಗಳನ್ನು ಆಲಿಸುತ್ತೇವೆ. ಯಾವುದೇ ಮೂಲೆಯಿಂದ ಮಾಹಿತಿ ಬಂದರೂ, ಮಾಧ್ಯಮಗಳು ಸೇರಿದಂತೆ ಯಾವುದೇ ಕಡೆಯಿಂದ ಏನೇ ಹೇಳಿಕೆಗಳು ಸಿಕ್ಕರೂ ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಡ್ರಗ್ಸ್ ದಂಧೆ ವಿರುದ್ಧ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಲಾಗುತ್ತದೆ. ಮುಂದಿನ ವಾರ ತನಿಖೆಗೆ ಮಹತ್ವದ ಸಮಯವಾಗಲಿದೆ. ಗಡಿ ರಾಜ್ಯಗಳಿಂದ ಬರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಈ ವಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಗಡಿ ಜಿಲ್ಲೆ ಪೊಲೀಸರಿಗೆ ನಿರ್ದೇಶನ ಕೊಡುತ್ತೇವೆ. ಡ್ರಗ್ಸ್ ದಂಧೆ ಪ್ರಕರಣದ ತನಿಖೆಯಲ್ಲಿ ಗುಪ್ತಚರ ಇಲಾಖೆಯ ಪೊಲೀಸರ ಬಳಕೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ABOUT THE AUTHOR

...view details