ಬೆಂಗಳೂರು :ಆರ್ಥಿಕ ಸಂಕಷ್ಟದ ಮಧ್ಯೆ 2021-22ರ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ಸೊರಗಿದ ಸಂಪನ್ಮೂಲ ಕ್ರೋಢೀಕರಣದಿಂದ ಮುಂಬರುವ ಬಜೆಟ್ ಗಾತ್ರವೂ ಕುಗ್ಗಲಿದೆ ಎನ್ನುವ ಮಾತು ಕೇಳಿ ಬರುತ್ತಿವೆ.
ರಾಜ್ಯ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಲಾಕ್ಡೌನ್ನಿಂದ ಆರ್ಥಿಕತೆಯೇ ಬುಡಮೇಲಾಗಿದೆ. ಬೊಕ್ಕಸ ತುಂಬಿಸುವ ಆದಾಯ ಮೂಲಗಳೆಲ್ಲವೂ ಸೊರಗಿ ಹೋಗಿದ್ದು, ತೆರಿಗೆ ಸಂಗ್ರಹದಲ್ಲೂ ನಿರೀಕ್ಷಿತ ಚೇತರಿಕೆ ಕಾಣುತ್ತಿಲ್ಲ. ಈ ಬಿಕ್ಕಟ್ಟಿನಲ್ಲಿ 2021-22ನೇ ಸಾಲಿನ ಹೊಸ ಬಜೆಟ್ ಮಂಡಿಸಬೇಕಾಗಿದೆ. ವ್ಯಾಪಾರ-ವಹಿವಾಟು ಕ್ಷೀಣಿಸಿರುವುದರಿಂದ ಸಂಪನ್ಮೂಲ ಸಂಗ್ರಹಕ್ಕೆ ಭಾರೀ ಹೊಡೆತ ಬಿದ್ದಿದೆ.
ಜಿಎಸ್ಟಿ ಪರಿಹಾರ ಕುಂಠಿತ :ಇತ್ತ ಜಿಎಸ್ಟಿ ಪರಿಹಾರ ಕುಂಠಿತವಾಗಿದ್ರೆ, ಇನ್ನೊಂದೆಡೆ ಕೇಂದ್ರದ ತೆರಿಗೆ ಪಾಲು ಕೂಡ ಖೋತಾ ಕಂಡಿದೆ. ಪರಿಸ್ಥಿತಿ ಹೀಗಿದ್ದಾಗ ರಾಜ್ಯದಲ್ಲಿ ಇರುವ ಏಕೈಕ ದಾರಿ ಸಾಲ ಎತ್ತುವಳಿ.
ಸಾಲ ಎತ್ತುವಳಿಯನ್ನೂ ಅಳೆದು ತೂಗಿ ಮಾಡಬೇಕಾಗಿದೆ. ಒಂದು ವೇಳೆ ಹೆಚ್ಚಿನ ಸಾಲದ ಮೊರೆ ಹೋದ್ರೆ ಅದರ ಭಾರ ರಾಜ್ಯದ ಬೊಕ್ಕಸದ ಮೇಲೆ ಬೀಳಲಿದೆ. ಹೀಗಾಗಿ ಸರ್ಕಾರ ಹೊಸ ಬಜೆಟ್ಗಾಗಿ ಹಣ ಹೊಂದಿಸುವ ಸಂಕಷ್ಟ ಎದುರಿಸುತ್ತಿದೆ.
ಹೊಸ ಬಜೆಟ್ ಗಾತ್ರ ಕುಗ್ಗುವ ಸಾಧ್ಯತೆ ಹೆಚ್ಚು :2021-22ನೇ ಸಾಲಿನ ಹೊಸ ಬಜೆಟ್ಗೆ ಈಗಾಗಲೇ ಪ್ರಾಥಮಿಕ ಸಿದ್ಧತೆಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಪ್ರತಿ ಇಲಾಖೆಗೆ ಬೇಕಾಗುವ ಅಂದಾಜು ವೆಚ್ಚದ ಲೆಕ್ಕಾಚಾರ ಒದಗಿಸುವಂತೆ ಸೂಚಿಸಲಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ನಿಖರ ಹಾಗೂ ವಾಸ್ತವ ವೆಚ್ಚದ ಅಂದಾಜು ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆರ್ಥಿಕ ಸಂಕಷ್ಟದ ಮಧ್ಯೆ ಆಯವ್ಯಯಕ್ಕಾಗಿ ಹಣ ಹೊಂದಿಸುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯದ ಗತಿಯಲ್ಲೇ ಆರ್ಥಿಕ ಚೇತರಿಕೆ ಕಾಣುತ್ತಿದ್ದರೆ ಸಂಪನ್ಮೂಲ ಕ್ರೋಢೀಕರಣ ಕಷ್ಟ ಸಾಧ್ಯ ಎಂಬುದು ಆರ್ಥಿಕ ಇಲಾಖೆ ಅಧಿಕಾರಿಗಳ ಆತಂಕ. ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಈ ಹಿಂದಿನ ಸ್ಥಿತಿಗೆ ಬರಲಿದೆ ಎಂಬ ಆಶಾಭಾವನೆ ಅಧಿಕಾರಿಗಳದ್ದಾಗಿದೆ.
ಓದಿ:ಶಿಕ್ಷಕರ ಸಾಂಕೇತಿಕ ಮುಷ್ಕರ: ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಬೊಮ್ಮಾಯಿ, ಸಚಿವ ಅಶೋಕ್
ಸದ್ಯದ ಪರಿಸ್ಥಿಯೇ ಮುಂದುವರೆದ್ರೆ 2021-22ನೇ ಸಾಲಿನ ಬಜೆಟ್ ಗಾತ್ರ ಕುಗ್ಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳೇ ಒಪ್ಪಿದ್ದಾರೆ. ಬಹುತೇಕ ಈ ಬಾರಿಯ ಬಜೆಟ್ ಗಾತ್ರ ಕುಗ್ಗಲಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
2020-21ನೇ ಸಾಲಿನಲ್ಲಿ ಸಿಎಂ ಯಡಿಯೂರಪ್ಪ ₹2.37 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಆದರೆ, ಈ ಬಾರಿಯ ಬಜೆಟ್ ಅದಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಹಿಂಜರಿಕೆ ಹಾಗೂ ಸಂಪನ್ಮೂಲ ಸಂಗ್ರಹ ಕೊರತೆ ಎದುರಿಸುತ್ತಿರುವ ಹಿನ್ನೆಲೆ ಬಜೆಟ್ ಗಾತ್ರ ಸಹಜವಾಗಿಯೇ ಕುಗ್ಗಲಿದೆ.
ಕೇಂದ್ರದ ಜಿಎಸ್ಟಿ ಪಾಲಿನ ಮೇಲೆ ಎಲ್ಲವೂ ನಿಂತಿದೆ. ಆದರೆ, ಆರ್ಥಿಕ ಸಂಕಷ್ಟದ ಹಿನ್ನೆಲೆ ಈ ಬಾರಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಜಿಎಸ್ಟಿ ಪಾಲು ಕೂಡ ಕಡಿಮೆಯಾಗಲಿದೆ. ಹೀಗಾಗಿ, ಈ ಬಾರಿಯ ಬಜೆಟ್ ಗಾತ್ರ ಕುಗ್ಗಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯದ ರಾಜ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ? :ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಬಹುತೇಕ ಬಿಗಡಾಯಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ತೆರಿಗೆ ಪಾಲು ಶೇ.38.8ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ನವೆಂಬರ್ವರೆಗೆ 19,914 ಕೋಟಿ ರೂ. ತೆರಿಗೆ ಹಂಚಿಕೆಯಾಗಿದ್ರೆ, ಈ ವರ್ಷ 12,192 ಕೋಟಿ ರೂ. ಮಾತ್ರ ಹಂಚಿಕೆಯಾಗಿದೆ.
ಅದೇ ರೀತಿ ಏಪ್ರಿಲ್‌ನಿಂದ ನವಂಬರ್‌ವರೆಗೆ ಕೇಂದ್ರದಿಂದ ನಮಗೆ ಸಿಗುತ್ತಿದ್ದ ಸಹಾಯಾನುದಾನ ಶೇ. 19.3ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ 22,667 ಕೋಟಿ ರೂ. ಸಹಾಯಾನುದಾನ ದೊರಕಿದ್ರೆ, ಈ ವರ್ಷ ನವಂಬರ್‌ವರೆಗೆ ಕೇವಲ ₹18,299 ಕೋಟಿ ಮಾತ್ರ ಸಿಕ್ಕಿದೆ. ಆರ್ಥಿಕ ಸಂಕಷ್ಟ ಹಿನ್ನೆಲೆ ಮುಂದಿನ ವರ್ಷವೂ ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನ ಕಡಿತವಾಗಲಿದೆ.
ನವಂಬರ್‌ವರೆಗೆ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಸುಮಾರು 1,298 ರೂ. ಕಡಿಮೆಯಾಗಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ 1,628 ಕೋಟಿ ರೂ. ಕಡಿಮೆಯಾಗಿದೆ. ವಾಣಿಜ್ಯ ತೆರಿಗೆಯಲ್ಲಿ ಸುಮಾರು 5,789 ಕೋಟಿ ರೂ. ಆದಾಯ ಕಡಿಮೆಯಾಗಿರುವುದು ಆರ್ಥಿಕ ಇಲಾಖೆ ಅಂಕಿ-ಅಂಶದಲ್ಲಿ ಗೊತ್ತಾಗಿದೆ.