ಬೆಂಗಳೂರು :ರಾಜ್ಯದಲ್ಲಿ ಬೈಕ್, ಟ್ಯಾಕ್ಸಿ ಸೇವೆ ರದ್ದುಗೊಳಿಸುವ ವಿಚಾರದ ಬೆಂಕಿ ಹೈ ಕೋರ್ಟ್ನಲ್ಲಿ ಇರುವುದರಿಂದ ಏನೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ. ರಾಜಧಾನಿದಲ್ಲಿ ಬೈಕ್, ಟ್ಯಾಕ್ಸಿ ಸೇವೆಯನ್ನು ರದ್ದು ಮಾಡುವಂತೆ ಆಟೋ ಚಾಲಕರು ಇಂದು ಮುಷ್ಕರ ನಡೆಸಿದರು. ಸಿಎಂ ನಿವಾಸ ಮುತ್ತಿಗೆ ಯತ್ನಿಸಿದ ಆಟೋ ಚಾಲಕರು, ಬೈಕ್, ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಬೈಕ್ ಸವಾರರು ಬಾಡಿಗೆ ಸೇವೆ ನೀಡುತ್ತಿದ್ದಾರೆ. ಇದರಿಂದ ಆಟೋಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹಾಗಾಗಿ, ರಾಪಿಡೋ ಬೈಕ್ ಮತ್ತು ವೈಟ್ ಬೋರ್ಡ್ ಟ್ಯಾಕ್ಸಿ ಬಂದ್ ಮಾಡಬೇಕು ಎಂದು ಆಟೋ ಚಾಲಕರು, ಸರ್ಕಾರವನ್ನು ಒತ್ತಾಯಿಸಿದರು.
ಇತ್ತ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಈ ಸಂಬಂಧ ಸ್ಪಷ್ಟನೆ ನೀಡುತ್ತಾ, ಹೈ ಕೋರ್ಟ್ನಲ್ಲಿ ಬೈಕ್, ಟ್ಯಾಕ್ಸಿ ವಿಚಾರವಾಗಿ ವಿಚಾರಣೆ ನಡೆಯುತ್ತಿದೆ. ಸದ್ಯ ಏನೂ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಸೂಚನೆ ನೀಡಿದೆ. ಹಾಗಾಗಿ ಹೈ ಕೋರ್ಟ್ನಲ್ಲಿ ಇತ್ಯರ್ಥವಾಗದೇ ನಾವು ಏನೂ ಮಾಡಲು ಸಾಧ್ಯವಿಲ್ಲ. ಮಾ.29ಕ್ಕೆ ಈ ವಿಚಾರವಾಗಿ ಹೈ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಸಾರಿಗೆ ಇಲಾಖೆ ಸಿದ್ಧ :ಹೈಕೋರ್ಟ್ನಲ್ಲಿ ನಾವು ವಾದ ಮಂಡಿಸಲಿದ್ದೇವೆ. ಬೈಕ್, ಟ್ಯಾಕ್ಸಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಸೇವೆ ಸ್ಥಗಿತಗೊಳಿಸಲು ಅನುವು ಮಾಡಿ ಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ. ನ್ಯಾಯಾಲಯ ಸೂಚನೆ ಕೊಟ್ಟರೆ, ಬೈಕ್, ಟ್ಯಾಕ್ಸಿಯನ್ನು ನಿಷೇಧಿಸಲು ಸಿದ್ಧರಿದ್ದೇವೆ. ಅದರಿಂದ ಕೋರ್ಟ್ ಸೂಚನೆಗೆ ನಾವು ಕಾಯುತ್ತಿದ್ದೇವೆ ಎಂದು ಸಿದ್ದರಾಮಪ್ಪ ಸ್ಪಷ್ಟಪಡಿಸಿದರು.
ಈಗಾಗಲೇ ಮೂರು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ರದ್ದು :ಮಹಾರಾಷ್ಟ್ರ, ತೆಲಂಗಾಣ ಹಾಗೂ ದೆಹಲಿಯಲ್ಲಿ ಬೈಕ್, ಟ್ಯಾಕ್ಸಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಅಲ್ಲಿನ ರಾಜ್ಯದ ಹೈ ಕೋರ್ಟ್ ತೀರ್ಪು ನೀಡಿತ್ತು.
ಬೈಕ್, ಟ್ಯಾಕ್ಸಿ ಕಾರ್ಯನಿರ್ವಹಣೆಗೆ ಆಪ್ ಆಧಾರಿತ ಅಗ್ರಗೇಟರ್ಸ್ಗೆ ಪರವಾನಿಗೆ ನೀಡಿಲ್ಲ. ಕಾರಣ ಹೈ ಕೋರ್ಟ್ ಹೊಸ ನೀತಿ ರೂಪಿಸದ ಹೊರತು ಬೈಕ್, ಟ್ಯಾಕ್ಸಿಗೆ ಅನುಮತಿ ನೀಡದಂತೆ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಮೂರು ರಾಜ್ಯಗಳಲ್ಲಿ ಬೈಕ್, ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಲಾಗಿದೆ. ಆದರೆ ಸಾರಿಗೆ ಇಲಾಖೆಯ ರದ್ದು ಆದೇಶದ ಹೊರತಾಗಿಯೂ ಆ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಚಾಲನೆಯಲ್ಲಿದೆ ಎಂದು ಹೇಳಲಾಗಿದೆ.