ಕರ್ನಾಟಕ

karnataka

ETV Bharat / state

ಅಧಿಕಾರಿಗಳ ವಿರುದ್ಧದ ಆರೋಪಕ್ಕೆ ವರ್ಗಾವಣೆ ಪರಿಹಾರವಲ್ಲ.. ಶಿಸ್ತು ಕ್ರಮಕ್ಕೆ ಹೈಕೋರ್ಟ್ ಸೂಚನೆ - ಸರ್ಕಾರದ ವರ್ಗಾವಣೆ ಆದೇಶ

ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಬಸನಗೌಡ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಡಾ. ಬಸನಗೌಡರ ಹುದ್ದೆಗೆ ವರ್ಗಾವಣೆಗೊಂಡಿದ್ದ ಡಾ ಪಾಟೀಲ್ ಶಶಿ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್
ಹೈಕೋರ್ಟ್

By

Published : Dec 19, 2022, 4:57 PM IST

ಬೆಂಗಳೂರು: ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಅವಧಿ ಪೂರ್ವ ವರ್ಗಾವಣೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಎದುರಾದ ತಕ್ಷಣ ವರ್ಗಾವಣೆ ಮಾಡುವುದು ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅಂತಹ ಅಧಿಕಾರಿಯ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಅವಲೋಕಿಸಿ ಶಿಸ್ತುಕ್ರಮ ಕೈಗೊಳ್ಳಬೇಕು. ತನಿಖೆಗೆ ಅಡ್ಡಿಯಾಗುವಂತಿದ್ದಲ್ಲಿ ಮಧ್ಯಂತರ ಅವಧಿಗೆ ಅಮಾನತ್ತು ಮಾಡಬೇಕು ಎಂದು ತಿಳಿಸಿದೆ.

ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಬಸನಗೌಡ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಡಾ. ಬಸನಗೌಡರ ಹುದ್ದೆಗೆ ವರ್ಗಾವಣೆಗೊಂಡಿದ್ದ ಡಾ ಶಶಿ ಪಾಟೀಲ್ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಮತ್ತು ಜಿ. ಬಸವರಾಜು ಅವರಿದ್ದ ವಿಭಾಗೀಯ ಪೀಠ, ಅಧಿಕಾರಿಗಳ ವಿರುದ್ಧದ ಆರೋಪಕ್ಕೆ ವರ್ಗಾವಣೆ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸರ್ಕಾರದ ಯಾವುದೇ ಅಧಿಕಾರಿಯ ವಿರುದ್ಧ ಆರೋಪಗಳು ಬಂದಲ್ಲಿ ಅದಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಿ ಆರೋಪ ಸಾಬೀತಾದಲ್ಲಿ ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ಕೆ ಮುಂದಾಗದೆ, ದೂರನ್ನು ಆಧರಿಸಿ ತಕ್ಷಣ ವರ್ಗಾವಣೆ ಮಾಡುವುದು ಪರಿಹಾರವಲ್ಲ. ಈ ರೀತಿಯ ಬೆಳವಣಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ತನ್ನ ಅಧಿಕಾರವನ್ನು ತ್ಯಜಿಸಿದಂತಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 100ಕ್ಕೂ ಹೆಚ್ಚು ವೈದ್ಯರು 2022ರ ಜುಲೈ 13 ರಂದು ಬಸನಗೌಡರ ವಿರುದ್ಧ ದೂರು ಸಲ್ಲಿಸಿ, ಅವರ ಅಧೀನದಲ್ಲಿ ಸೇವೆ ಸಲ್ಲಿಸುವುದು ಇಷ್ಟವಿಲ್ಲ ಎಂದು ವಿವರಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ರೀತಿಯ ಗಂಭೀರ ಆರೋಪ ಸಂಬಂಧ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅಂತಹ ಆರೋಪ ಸಾಬೀತಾದಲ್ಲಿ ಕಾನೂನು ಪ್ರಕಾರ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಜತೆಗೆ, ಬಸನಗೌಡರ ವಿರುದ್ಧ ದೂರು ಬಂದ ತಕ್ಷಣ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ, ಎರಡು ತಿಂಗಳ ಕಾಲ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅದರ ಬದಲಾಗಿ ಎರಡು ತಿಂಗಳ ಕಾಲ ಸುಮ್ಮನಿದ್ದು, 2022ರ ಅಕ್ಟೋಬರ್ 1 ರಂದು ವರ್ಗಾವಣೆ ಮಾಡಿದೆ. ಜುಲೈ 29ರಂದು ವರ್ಗಾವಣೆಯನ್ನು ಅನುಮೋದಿಸಿದ್ದು, ಅಕ್ಟೋಬರ್ 1 ರಿಂದ ಜಾರಿಗೆ ಬಂದಿದೆ ಎಂಬುದರಲ್ಲಿ ಯಾವುದೇ ಗಂಭೀರತೆ ಅಥವಾ ತುರ್ತನ್ನು ತೋರಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು, ವರ್ಗಾವಣೆ ಆದೇಶ ರದ್ದುಪಡಿಸಿದೆ. ಅಲ್ಲದೆ, ಪ್ರಕರಣದ ಪ್ರತಿವಾದಿಯಾಗಿರುವ ಬಸನಗೌಡ ವಿರುದ್ಧದ ಆರೋಪ ಸಂಬಂಧ ಅಗತ್ಯವಿದ್ದಲ್ಲಿ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಸ್ವಾತಂತ್ರ್ಯವಿರಲಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ..ಡಾ. ಬಸನಗೌಡ ಅವರು 2022ರ ಜನವರಿ 13 ರಿಂದ ಧಾರವಾಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಅವರನ್ನು 2022ರ ಅಕ್ಟೋಬರ್ 1ರಂದು ಸರ್ಕಾರ ವರ್ಗಾವಣೆ ಮಾಡಿತ್ತು. ಅಲ್ಲದೆ, ಅವರ ಹುದ್ದೆಗೆ ಡಾ. ಶಶಿ ಪಾಟೀಲ್ ಅವರನ್ನು ನಿಯೋಜಿಸಿತ್ತು.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಸನಗೌಡ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ವರ್ಗಾವಣೆ ಮಾಡಲಾಗಿದೆ. ಗ್ರೂಪ್ ಎ ಪ್ರವರ್ಗದ ಅಧಿಕಾರಿಗಳನ್ನು ಕನಿಷ್ಟ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವರ್ಗಾವಣೆ ಮಾಡುವಂತಿಲ್ಲ. ಅಲ್ಲದೆ, ಸ್ಥಳೀಯ ಸಂಸದರು ನನ್ನ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಸರ್ಕಾರದ ವರ್ಗಾವಣೆ ಆದೇಶವನ್ನು ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಬಸನಗೌಡ ಹುದ್ದೆಗೆ ವರ್ಗಾವಣೆಗೊಂಡಿದ್ದ ಡಾ ಶಶಿ ಪಾಟೀಲ್ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಡಾ. ಶಶಿ ಪಾಟೀಲ್ ಅವರ ಪರ ವಕೀಲರು, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಬಸನಗೌಡ ಅವರ ವಿರುದ್ಧ ಗಂಭೀರ ಆರೋಪವಿದ್ದ ಕಾರಣ ಅವರನ್ನು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ವರ್ಗಾವಣೆ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಇದೇ ವಾದವನ್ನು ಆರೋಗ್ಯ ಇಲಾಖೆಯೂ ಮಂಡಿಸಿತ್ತು.

ಓದಿ:ಖಾಸಗಿ ಕಂಪನಿಗಳ ನೌಕರರಿಗೂ ಬಿಹೆಚ್ ಸರಣಿ ಅಡಿ ವಾಹನಗಳ ನೋಂದಣಿಗೆ ಅವಕಾಶ ನೀಡಲು ಹೈಕೋರ್ಟ್ ಸೂಚನೆ

ABOUT THE AUTHOR

...view details