ಬೆಂಗಳೂರು:ಬಿಜೆಪಿ ಹತ್ತು ಶಾಸಕರ ಅಮಾನತು ಯಾರ ಒತ್ತಡದಿಂದ ಮಾಡಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದರು. ಅಧಿವೇಶನ ಮುಕ್ತಾಯದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆ ನಡೆಸುವುದು ಎಲ್ಲ ನಾಯಕರ ಜವಾಬ್ದಾರಿ. ಅದಕ್ಕಾಗಿ ಎಲ್ಲರ ಸಹಕಾರ ಬೇಕು. ಯಾರೇ ಸದಸ್ಯರು ಪೀಠಕ್ಕೆ ಅಗೌರವದಿಂದ ನಡೆದುಕೊಂಡರೆ ಆ ಪೀಠದ ಸಭಾಧ್ಯಕ್ಷನಾಗಿ ನಾನು ಕ್ರಮ ಕೈಗೊಂಡಿದ್ದೇನೆ ಎಂದರು.
ಇದರಲ್ಲಿ ಪಕ್ಷದ ವಿಚಾರ ಇಲ್ಲ. ನೋಟೀಸ್ ನೀಡದೇ ಇದ್ದರೂ ಅವರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದೆ. ಆದರೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಳಿಕ ಬಿಜೆಪಿಯವರನ್ನು ಕರೆದು 15 ನಿಮಿಷ ಮಾತನಾಡಿದ್ದೇನೆ. ಆದರೆ ಅವರು ಧರಣಿ ಮುಂದುವರಿಸಿದರು ಎಂದರು.
ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕಿತ್ತು. ಅದು ಜನ ಪರವಾದ ಬಿಲ್ ಆಗಿತ್ತು. ಹಾಗಾಗಿ ಪ್ರತಿಭಟನೆಯ ಮಧ್ಯೆ ವಿಧೇಯಕಗಳನ್ನು ತೆಗೆದುಕೊಂಡೆವು. ಆದರೆ, ಉಪಸಭಾಧ್ಯಕ್ಷರ ಮುಖಕ್ಕೆ ಬಿಲ್ ಹರಿದು ಹಾಕಿರುವುದು ಪೀಠಕ್ಕೆ ಮಾಡಿದ ಅಗೌರವವಾಗಿದೆ. ನಮಗೆ ಬೇರೆ ಉಪಾಯ ಇಲ್ಲದೇ ಈ ನಿರ್ಧಾರ ತೆಗದುಕೊಂಡಿದ್ದೇನೆ. ಅತ್ಯಂತ ನೋವಿನಿಂದ ತೆಗೆದುಕೊಂಡ ಕ್ರಮವಾಗಿದೆ. ನಾನು ಕ್ರಮ ಕೈಗೊಳ್ಳದಿದ್ದರೆ ಜನರು ಟೀಕೆ ಮಾಡುತ್ತಿದ್ದರು ಎಂದರು.
ನಾನು ಲಕ್ಷ್ಮಣ ರೇಖೆ ದಾಟಿಲ್ಲ: ಮಹಾಘಟಬಂಧನ ಸಭೆಯ ಭೂಜನಕೂಟಕ್ಕೆ ಹೋದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಅವರು ಔತಣಕೂಟ ಏರ್ಪಡಿಸಿದ್ದರು. ಸಿಎಂ ನಮಗೆ ಆಹ್ವಾನ ನೀಡಿದ್ದರು. ಅಲ್ಲಿ ಯಾರು ಬರುತ್ತಾರೆ ಎಂದು ನಮಗೆ ಗೊತ್ತಿಲ್ಲ. ನಾವು ಊಟ ಮಾಡಿ ಬಂದಿದ್ದೇವೆ. ಅಲ್ಲಿನ ಸಭೆಯಲ್ಲಿ ನಾವೇನು ಪಾಲ್ಗೊಂಡಿಲ್ಲ. ಬೇರೆಯವರು ಕರೆದರೆ ಅದಕ್ಕೂ ನಾನು ಹೋಗುತ್ತೇನೆ. ನಾನು ಯಾವುದೇ ಲಕ್ಷ್ಮಣ ರೇಖೆ ದಾಟಿಲ್ಲ ಎಂದು ಸಮರ್ಥಿಸಿಕೊಂಡರು.