ಬೆಂಗಳೂರು:ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರದ ದೇಗುಲದ ಒಳಗೆ ಸೂರ್ಯರಶ್ಮಿ ಪ್ರವೇಶಿಸಿ ಈಶ್ವರನನ್ನು ಸ್ಪರ್ಶಿಸಿದೆ ಹಾಗೂ ಅಲ್ಲಿಗೆ ಸಾವಿರಾರು ಭಕ್ತರು ಬಂದು ದೇವರ ಆಶೀರ್ವಾದ ಪಡೆದರು.
ಗವಿಗಂಗಾಧರೇಶ್ವರದ ದೇಗುಲದ ಒಳಗೆ ಸೂರ್ಯರಶ್ಮಿ ಪ್ರವೇಶ ಈ ವೇಳೆ ಮಾತನಾಡಿದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್, ಈ ಬಾರಿ ಒಂದು ನಿಮಿಷ ಹದಿನೇಳು ಸೆಕೆಂಡ್ ಪಾದದಿಂದ ಶಿರದವರೆಗೆ ಸೂರ್ಯನ ಕಿರಣಗಳು ಈಶ್ವರನ ಮೇಲೆ ಬಿದ್ದವು. ಇದರಲ್ಲಿ ಮೂರು ಸೆಕೆಂಡ್ ಮಾತ್ರ ಈಶ್ವರನ ಮೇಲೆ ಸ್ಥಿರವಾಗಿ ನಿಂತಿತು. ಕಳೆದ ಬಾರಿ ಏಳು ಸೆಕೆಂಡ್ ನಿಂತಿದ್ದದ್ದರಿಂದ ಅನಾನುಕೂಲಗಳಾದವು. ಎಲ್ಲರ ಪ್ರಾರ್ಥನೆ ಮನ್ನಿಸಿ ಈ ಬಾರಿ ಕೇವಲ ಮೂರು ಸೆಕೆಂಡ್ ನಿಂತಿದ್ದರಿಂದ ಎಲ್ಲರಿಗೂ ಈ ಬಾರಿ ಶುಭವಾಗಲಿದೆ. ಈಶ್ವರನ ಅನುಗ್ರಹ ಪಡೆದು, ಮೂರು ಸೆಕೆಂಡ್ ಈಶ್ವರನ ಮೇಲೆ ನಿಂತು, ಉತ್ತರಾಯಣ ಪ್ರವೇಶ ಪಡೆದಿದ್ದಾನೆ. ರವಿದೆಶೆಯಿಂದಲೇ ರಾಜಕೀಯಕ್ಕೆ ಅನುಕೂಲವಾಗೋದು. ರಾಜಕಾರಣಿಗಳು ಬಂದು ದೇವರ ದರ್ಶನ ಪಡೆದಿದ್ದಾರೆ. ರಾಜಕಾರಣಿಗಳ ಬಗ್ಗೆ ಈ ಸಂಧರ್ಭದಲ್ಲಿ ಹೇಳೋದಿಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾತನಾಡಿ, ಮಕರ ಸಂಕ್ರಾಂತಿ ದಿನ ಶಿವಲಿಂಗ ಸೂರ್ಯನ ಕಿರಣಗಳಿಂದ ಅಭಿಷೇಕ ಮಾಡೋದು ಪ್ರತೀತಿ. 1300 ವರ್ಷಗಳ ಹಿಂದೆ ದೇವಸ್ಥಾನ ಕಟ್ಟಿದ ಪುಣ್ಯಾತ್ಮರು ಈ ರೀತಿ ಕಿರಣ ಬೀಳುವ ರೀತಿ ಕಟ್ಟಿದ್ದಾರೆ. ಇವತ್ತು ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಬಂದಿವೆ, ಆದ್ರೆ ಅವತ್ತು ಕಟ್ಟಿದವರು ಪುಣ್ಯಾತ್ಮರು. ನಮ್ಮ ಪೂರ್ವಿಕರು ಸೂರ್ಯನಿಂದ ಅಭಿಷೇಕ ಮಾಡುವಂತೆ ಕಟ್ಟಿದ್ದಾರೆ. ಇದೊಂದು ನಂಬಿಕೆ. ಎಲ್ಲರಿಗೂ ದೇವರು ಒಳ್ಳೇದು ಮಾಡಲಿ ಎಂದರು.
ಸಂಸದೆ ಶೋಭ ಕರಂದ್ಲಾಜೆ ಮಾತನಾಡಿ, ನಮ್ಮ ಪೂರ್ವಜರು ಎಷ್ಟು ಶ್ರೇಷ್ಠ ಎಂಜಿನಿಯರ್, ವಿಜ್ಞಾನಿಗಳಾಗಿದ್ರು ಅನ್ನೋದಕ್ಕೆ ಇದು ಸಾಕ್ಷಿ. ನೇರವಾಗಿ ಶಿವಲಿಂಗ ಸ್ಪರ್ಶ ಮಾಡುವ ವಿಜ್ಞಾನವನ್ನ ಅವತ್ತೇ ಮಾಡಿದ್ದರು. ನಾವು ಪುಣ್ಯವಂತರು. ಇದು ಖುಷಿ, ಆನಂದ ತಂದಿದೆ. ಯಾರು ದೇವರನ್ನ ನಂಬಲ್ಲ, ಅವರು ಬಂದು ಇಲ್ಲಿ ನೋಡ್ಬೇಕು. ರಷ್ಯಾದಲ್ಲಿ ಹುಟ್ಟಿದವರನ್ನ ಒಪ್ಪಿಕೊಳ್ತಾರೆ, ಅಮೆರಿಕಾದವರನ್ನ ದೊಡ್ಡವರು ಅಂತಾರೆ ಅಂತವರು ಬಂದು ಇಲ್ಲಿ ನೋಡಬೇಕು. ನಮ್ಮ ದೇಶದ ಹಿರಿಯರ ಶ್ರೇಷ್ಟತೆ ಎಷ್ಟಿತ್ತು ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.