ಬೆಂಗಳೂರು :ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸ್ ಇಲಾಖೆ ಕೊಡುಗೆ ಅನನ್ಯವಾಗಿದೆ. ಕರ್ನಾಟಕ ಪೊಲೀಸ್ ಪಡೆ ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪೊಲೀಸ್ ಪಡೆ ಎಂದು ಇಡೀ ದೇಶದಲ್ಲಿ ಹೆಸರಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸರು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ, ಅಪರಾಧಿಗಳನ್ನು ಪತ್ತೆ ಮಾಡುವ ಗುರುತರ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಸಮಾಜದ ನೆಮ್ಮದಿಗೆ ಕಾರಣರಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಬದಿಗಿರಿಸಿ ಕರ್ತವ್ಯಪರತೆ ಮರೆಯುವ ಸಿಬ್ಬಂದಿ, ತಮ್ಮ ದಕ್ಷತೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಿದ್ದಾರೆ ಎಂದರು.
ಇಲಾಖೆಗೆ 206 ಹೊಸ ಹುದ್ದೆಗಳ ಸೃಷ್ಟಿಸಲು ಸರ್ಕಾರದಿಂದ ಮಂಜೂರಾತಿ ಆದೇಶ ಇತ್ತೀಚಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು, ತನಿಖೆಯ ನಿಖರತೆಯನ್ನು ಹೆಚ್ಚಿಸಲು ಹಾಗೂ ಅಪರಾಧ ಪ್ರಕರಣಗಳನ್ನು ಸಾಬೀತುಪಡಿಸಲು ಸ್ಥಳದಲ್ಲಿರುವ ಸಾಕ್ಷಿಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ, ಸಾಕ್ಷಿ ಸಂಗ್ರಹಣೆಗೆ ಸೀನ್ ಆಫ್ ಕ್ರೈಂ ಅಧಿಕಾರಿಗಳ ಹುದ್ದೆ ಸೃಷ್ಟಿಸಿ 206 ಅಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಹೇಳಿದರು.
ಪೊಲೀಸ್ ವಿದ್ಯಾನಿಧಿ ಯೋಜನೆ : ಪೊಲೀಸ್ ಇಲಾಖೆ ಅಭಿವೃದ್ಧಿ ಜೊತೆಗೆ ಸಿಬ್ಬಂದಿಯ ಕ್ಷೇಮಾಭಿವೃದ್ಧಿ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರ ಆರೋಗ್ಯ ಯೋಜನೆ ಅನುಷ್ಠಾನಗೊಳಿಸಿದೆ. ಅದೇ ರೀತಿ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಜತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಪೊಲೀಸ್ ವಿದ್ಯಾನಿಧಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆ : ಗುಣಮಟ್ಟದ ಶಿಕ್ಷಣ ಒದಗಿಸಲು ಕೆಲ ಜಿಲ್ಲೆಗಳಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗಿದೆ. ಶಿಗ್ಗಾವಿಯಲ್ಲಿ ಕೆಎಸ್ಆರ್ಪಿ ಪೊಲೀಸ್ ಶಾಲೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗಸ್ತು ವ್ಯಾನುಗಳು ಹಳೆಯದಾಗಿವೆ. 50 ಮಿನಿ ಬಸ್ಗಳನ್ನು ಖರೀದಿಸಲು ಮಂಜೂರಾತಿ ನೀಡಿದೆ. ಪೊಲೀಸ್ ಕಲ್ಯಾಣ ಯೋಜನೆಯಲ್ಲಿ ರಿಯಾಯಿತಿ ಕ್ಯಾಂಟೀನ್ಗೆ ಕ್ರಮಕೈಗೊಳ್ಳಲಾಗಿದೆ. ಇಲಾಖೆ ಬಲಪಡಿಸಲು ಹಾಗೂ ಪೊಲೀಸ್ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನ ಬಳಕೆ :10,032 ವಸತಿ ಗೃಹಗಳನ್ನು ನಿರ್ಮಿಸುವ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸ್ವಂತ ಕಟ್ಟಡವಿಲ್ಲದ ಪೊಲೀಸ್ ಠಾಣೆಗಳಿಗೆ ಮುಂದಿನ ಐದು ವರ್ಷದಲ್ಲಿ ಒಟ್ಟು 200 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಕೊಡಲಾಗುತ್ತದೆ. ಕರಾವಳಿ ಭಾಗದ ಸುರಕ್ಷತೆ ಮತ್ತು ಭದ್ರತೆ ಹೆಚ್ಚಿಸಲು ಕರಾವಳಿ ಕಾವಲು ಪಡೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಲಪಡಿಸಲಾಗುತ್ತದೆ ಎಂದು ಹೇಳಿದರು.
ಓದಿ:ಹಡೀಲು ಗದ್ದೆಗಿಳಿದು ಬೇಸಾಯ ಮಾಡಿ 'ಸಾಂಪ್ರದಾಯಿಕ ಕೃಷಿ' ಪ್ರೇರೇಪಿಸಿದ ಕಟೀಲ್