ಬೆಂಗಳೂರು:ಕೊರೊನಾ ವೈರಸ್ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಯುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆ ದುರ್ಬಲವಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನೇ ಯಥಾವತ್ತಾಗಿ ರಾಜ್ಯದಲ್ಲಿ ಅಂಗೀಕರಿಸುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ವಕೀಲ ಜಿ.ಆರ್.ಮೋಹನ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಿಐಎಲ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಏ. 28ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಅರ್ಜಿಯ ವಿವರ:
ಕೊರೊನಾ ವೈರಸ್ ಸೋಂಕಿನ ತಡೆ ಮತ್ತು ನಿಯಂತ್ರಣ ಕರ್ತವ್ಯದಲ್ಲಿ ನಿರತರಾಗಿರುವ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಅದನ್ನು ಸಂಜ್ಞೆಯ (ಕಾಗ್ನಿಜೆಬಲ್) ಮತ್ತು ಜಾಮೀನು ರಹಿತ ಅಪರಾಧ ಕೃತ್ಯ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಅದರಂತೆ ತಪ್ಪಿತಸ್ಥರಿಗೆ ದಂಡ ಸಹಿತ ಏಳು ವರ್ಷ ಕಠಿಣ ಶಿಕ್ಷೆ ನಿಗದಿಪಡಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಅಪರಾಧವನ್ನು ಅಸಂಜ್ಞೆಯ (ನಾನ್ ಕಾಗ್ನಿಜೆಬಲ್) ಹಾಗೂ ಜಾಮೀನು ಸಹಿತ ಅಪರಾಧ ಕೃತ್ಯ ಎಂದು ಪರಿಗಣಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಕೂಡ ಕಡಿಮೆ ಮಾಡಿದ್ದು, ಅದರಂತೆ ಮೂರು ವರ್ಷ ಜೈಲು ಶಿಕ್ಷೆ, 50 ಸಾವಿರ ದಂಡ ವಿಧಿಸುವ ಅವಕಾಶವಷ್ಟೇ ಇದೆ.
ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯೊಂದಿಗೆ ಹೋಲಿಸಿದರೆ ಸಾಕಷ್ಟು ದುರ್ಬಲವಾಗಿದೆ. ಅಲ್ಲದೇ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಾಯ್ದೆ-1897ರ ಉದ್ದೇಶಗಳನ್ನು ಈ ಸುಗ್ರೀವಾಜ್ಞೆ ನಿಷ್ಫಲಗೊಳಿಸಲಿದೆ ಎಂದು ಅರ್ಜಿದಾರರು ದೂರಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರ ತನ್ನ ದುರ್ಬಲ ಸುಗ್ರೀವಾಜ್ಞೆ ಕೈಬಿಟ್ಟು, ಕೇಂದ್ರದ ಸುಗ್ರೀವಾಜ್ಞೆಯನ್ನು ಅಂಗೀಕರಿಸುವಂತೆ ನಿರ್ದೇಶಿಸಿಬೇಕು ಎಂದು ಕೋರಿದ್ದಾರೆ.