ಬೆಂಗಳೂರು:ಮುಖ್ಯಮಂತ್ರಿಗಳ ಆದೇಶದಂತೆ ಮಹಾನಗರದ ಪ್ರದೇಶಗಳಾದ ಪಾದರಾಯನಪುರ, ಬಾಪೂಜಿನಗರ ಹಾಗೂ ಟಿಪ್ಪು ನಗರಕ್ಕೆ ಇಂದು ಖುದ್ದು ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಸೂಕ್ತ ಕ್ರಮಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ವಿವಿಧ ಕೊರೊನಾ ಪೀಡಿತ ಪ್ರದೇಶಗಳ ಪರಿಶೀಲನೆಗೆ ಸೂಚಿಸಲಾಗಿದ್ದು, ಆ ಪ್ರಕಾರ ಬೆಂಗಳೂರಿನ ಈ 3 ಸ್ಥಳಗಳಿಗೆ ಭೇಟಿ ಕೊಟ್ಟು ಬಂದಿದ್ದೇನೆ. ಆಗ ನನಗೆ ಅಲ್ಲಿ ಸೀಲ್ ಡೌನ್ ಆದ ಪ್ರದೇಶದಲ್ಲೂ ಜನ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದರು.
ಇನ್ನೂ, ಜನರ ಓಡಾಟವನ್ನು ಸೀಮಿತಕ್ಕೆ ತರುವ ಸಲುವಾಗಿ ಬೆಳಗಿನ ಹೊತ್ತು ಅಗತ್ಯ ವಸ್ತುಗಳ ಪೂರೈಕೆ ಸಮರ್ಪಕವಾಗಿ ಆಗಬೇಕೆಂದು ಸೂಚಿಸಿದ್ದೇನೆ. ಸ್ವಚ್ಛತೆಗೆ ಆದ್ಯತೆ ಕೊಡಬೇಕು, ಒಳಚರಂಡಿ ಹಾಗೂ ರಸ್ತೆಗಳನ್ನು ಸ್ವಚ್ಛವಾಗಿಡಬೇಕು. ಕೊರೊನಾ ಸೂಚನೆ ಕಂಡವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು. ಈಗಾಗಲೇ ಆಸ್ಪತ್ರೆಯಲ್ಲಿರುವ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಬೇಕು. ಅವರನ್ನ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇಡಲು ಸೂಚಿಸಿದ್ದೇನೆ ಎಂದರು.
ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ -ಧಾರವಾಡ, ಬೆಳಗಾವಿ, ಬೀದರ್, ಕಲ್ಬುರ್ಗಿ ಮುಂತಾದ ಜಿಲ್ಲೆಗಳಲ್ಲಿ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ವಿಶೇಷ ನಿಗಾ ವಹಿಸಲು ಸೂಚಿಸಿದ್ದೇನೆ. ರಂಜಾನ್ ಆಚರಣೆ ಸಂದರ್ಭ ಸೇರಿದಂತೆ ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಲಾಕ್ಡೌನ್ಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ಲಭಿಸಿದೆ ಎಂದರು.
ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದೇವೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಅಗತ್ಯ ನಿಯಂತ್ರಣ ಸೂತ್ರ ಅನುಸರಿಸಿದ್ದು, ದೇಶದಲ್ಲಿಯೇ ರಾಜ್ಯಕ್ಕೆ ನಿಯಂತ್ರಣದ ವಿಚಾರದಲ್ಲಿ ಉತ್ತಮ ಯಶಸ್ಸು ಸಿಕ್ಕಿದೆ ಎಂದರು.