ಕರ್ನಾಟಕ

karnataka

ETV Bharat / state

ಇಂದು ವಿಶ್ವ ಶೌಚಾಲಯ ದಿನ: ಒಂದು ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕ್ರಮ...

ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನ ಸಹಾಯ ನೀಡುತ್ತಿದ್ದು, ಸ್ವಚ್ಛ ಭಾರತ ಅಭಿಯಾನ ಕರ್ನಾಟಕದಲ್ಲೂ ಉತ್ತಮ ಬೆಳವಣಿಗೆಯಾಗಿದೆ.

World Toilet Day
ವಿಶ್ವ ಶೌಚಾಲಯ ದಿನ

By

Published : Nov 19, 2020, 9:22 PM IST

ಬೆಂಗಳೂರು: ಮನುಷ್ಯನಿಗೆ ಶೌಚಾಲಯ ಅತೀ ಮುಖ್ಯವಾಗಿದೆ. ನೈರ್ಮಲ್ಯಕ್ಕೆ ಒತ್ತು ನೀಡದೆ ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಹಲವು ರೀತಿಯ ರೋಗಗಳು ಹರಡುತ್ತವೆ. ಹೀಗಾಗಿ, ಜಗತ್ತಿನ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿವೆ. ನಮ್ಮ ದೇಶದಲ್ಲೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂದು ವಿಶ್ವ ಶೌಚಾಲಯ ದಿನವನ್ನಾಗಿ ಘೋಷಿಸಲಾಗಿದೆ.

ರಾಜ್ಯದ ಶೌಚಾಲಯಗಳ ಪ್ರಗತಿ ಮತ್ತು ಸರ್ಕಾರದಿಂದಾಗುತ್ತಿರುವ ಕಾರ್ಯಕ್ರಮದ ನೋಟ ಇಲ್ಲಿದೆ. ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನ ಸಹಾಯವನ್ನೂ ನೀಡುತ್ತಿದೆ. ಸ್ವಚ್ಛ ಭಾರತ ಅಭಿಯಾನ ಕರ್ನಾಟಕದಲ್ಲೂ ಉತ್ತಮ ಬೆಳವಣಿಗೆಯಾಗಿದೆ.

2001 ರಲ್ಲಿ ಶೇ.17.4 ರಷ್ಟಿದ್ದ ಶೌಚಾಲಯಗಳ ನಿರ್ಮಾಣ ಪ್ರಗತಿ 2011 ರಲ್ಲಿ ಶೇ.28.4 ಕ್ಕೆ ಏರಿಕೆಯಾಗಿತ್ತು. ನಂತರ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳ ಜಿಲ್ಲೆಗಳು ಸಂಪೂರ್ಣ ಬಯಲು ಶೌಚಮುಕ್ತ ಎಂದು ಘೋಷಣೆಯಾಗಿದ್ದವು.

ಇನ್ನು ಕಳೆದ ವರ್ಷ ರಾಜ್ಯದಲ್ಲಿ ಒಟ್ಟು 34 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. 2017 ರಲ್ಲಿ ಇದಕ್ಕಾಗಿ 2,100 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಅಂಕಿ ಅಂಶ ನೀಡಿದೆ. ರಾಜ್ಯದಲ್ಲಿರುವ ಒಟ್ಟು 27,623 ಗ್ರಾಮಗಳ ಪೈಕಿ ಸದ್ಯ 6,829 ಗ್ರಾಮಗಳು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿವೆ. ಬಯಲಿನಲ್ಲಿ ಶೌಚ ಮಾಡುವುದರಿಂದ ಮನುಷ್ಯನ ಮಲ, ಮೂತ್ರದಿಂದ ಹರಡುವ ಕಾಯಿಲೆಗಳು ಜೀವ ತೆಗೆಯುವಂತಹ ಮಾರಕವಾಗಿರುತ್ತವೆ.

ರಾಜ್ಯದ ಸ್ಥಿತಿಗತಿ ಹೇಗಿದೆ? :

2017 ರಿಂದ 2018 ರವರೆಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಲು ಅಭಿಯಾನದ ಮೂಲಕ ಪ್ರತಿ ಕುಟುಂಬ ಶೌಚಾಲಯ ಹೊಂದಬೇಕೆನ್ನುವ ಗುರಿ ಹೊಂದಲಾಗಿತ್ತು. ರಾಜ್ಯದಲ್ಲಿ ಅಂದಾಜು 70.26ಲಕ್ಷ ಕುಟುಂಬಗಳಿಗೆ ಶೌಚಾಲಯದ ಅಗತ್ಯವಿತ್ತು. ಇದರಲ್ಲಿ ಕೇವಲ 24.83 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿದ್ದವು. ಆದರೆ ಇನ್ನೂ 45.42 ಕುಟುಂಬಗಳು ವೈಯಕ್ತಿಕ ಶೌಚಾಲಯದಿಂದ ದೂರ ಉಳಿದಿದ್ದರು. ಸರ್ಕಾರ ಜಾಗೃತಿ ಮೂಡಿಸುವ ಮೂಲಕ ಒಂದೇ ವರ್ಷದಲ್ಲಿ 70.26 ಲಕ್ಷ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡಿತ್ತು. ವಿಶ್ವ ಶೌಚಾಲಯ ದಿನದ ಅಂಗವಾಗಿ ರಾಜ್ಯ ಸರ್ಕಾರ ಶೌಚಾಲಯ ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿದೆ.

ವೈಯಕ್ತಿಕ ಗೃಹ ಶೌಚಾಲಯ :

ಗ್ರಾಮೀಣ ಪ್ರದೇಶದಲ್ಲಿ ಸುಮಾರು 49 ಲಕ್ಷ ಕುಟುಂಬಗಳಿಗೆ ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಒಂದು ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.

ದ್ರವ ತ್ಯಾಜ್ಯ ನಿರ್ವಹಣೆ :

ರಾಜ್ಯದ 4,464 ಗ್ರಾಮ ಪಂಚಾಯಿತಿಗಳಲ್ಲಿ ದ್ರವ ತ್ಯಾಜ್ಯ (ಬೂದು ನೀರು) ನಿರ್ವಹಣೆ ಮಾಡಲು 173 ಕೋಟಿ ರೂ.ಗಳಿಗೆ ಅನುಮೋದನೆ ಹಾಗೂ
ಸ್ವಚ್ಛ ಭಾರತ್ ಮಿಷನ್ ಯೋಜನೆ ಅನುದಾನದಡಿ 205 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಮಲ ತ್ಯಾಜ್ಯ ನಿರ್ವಹಣಾ ಘಟಕಗಳು :

100 ಮಲ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿರುವ ಸರ್ಕಾರ, ಪ್ರಾಯೋಗಿಕವಾಗಿ 16 ಸ್ಥಳಗಳಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ.

ಸಮುದಾಯ/ಸಾರ್ವಜನಿಕ ಶೌಚಾಲಯ :

ಈವರೆಗೆ ಸುಮಾರು 1,160 ಸಮುದಾಯ/ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡಲಾಗಿದ್ದು, 1,000 ಘಟಕಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.

ಘನ ತ್ಯಾಜ್ಯ ನಿರ್ವಹಣೆ :

ರಾಜ್ಯದ ಎಲ್ಲಾ 6,002 ಗ್ರಾಮ ಪಂಚಾಯತಿಗಳಲ್ಲಿ ವೈಜ್ಞಾನಿಕವಾಗಿ ಘನ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details