ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯ ನಾನಾ ವೃಂದಗಳ ಸಿಬ್ಬಂದಿ ಗಳಿಗೆ ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅನುಯಾಯಿ, ಜಮೇದಾರ್ ಅನುಯಾಯಿ, ಪೇದೆ, ಮುಖ್ಯಪೇದೆ, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮತ್ತು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳ ಭತ್ಯೆಯನ್ನು ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ.
ಜತೆಗೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೂ ಮಾಸಿಕ ಸಾವಿರ ರೂಪಾಯಿಯನ್ನು ಮುಂದಿನ ವೇತನ ಶ್ರೇಣಿ ಪರಿಷ್ಕರಣೆಯವರೆಗೂ ಮಂಜೂರು ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಆದೇಶದ ಅನ್ವಯ ಮಂಜೂರು ಮಾಡಲಾದ ಭತ್ಯೆಯು ನಿಯೋಜನೆ ಮತ್ತು ವಿಶೇಷ ನಿಯೋಜನೆ ಮೇಲೆ ತೆರಳುವ ಹಾಗೂ ವಿಶೇಷ ಭತ್ಯೆ ಪಡೆಯುತ್ತಿರುವವರಿಗೆ ಅನ್ವಯಿಸುವುದಿಲ್ಲ.
ಹಾಗೆಯೇ ಈ ಭತ್ಯೆ ಹೆಚ್ಚಳವು ಮುಂದಿನ ವೇತನ ಪರಿಷ್ಕರಣೆ ಅಥವಾ ಮುಂದಿನ ಸರ್ಕಾರದ ಆದೇಶದಲ್ಲಿ ಯಾವುದು ಮೊದಲೋ ಅಲ್ಲಿಯವರೆಗೂ ಮಾತ್ರ ಪಾವತಿಸತಕ್ಕದ್ದು. ಈ ಆದೇಶ ನವೆಂಬರ್ ಒಂದರಿಂದಲೇ ಜಾರಿಗೆ ಬರುತ್ತದೆ.
ಹಾಲಿ ಅನುಯಾಯಿ, ಜಮೇದಾರ್ ಅನುಯಾಯಿ, ಮುಖ್ಯಪೇದೆ, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮತ್ತು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಕಷ್ಟ ಪರಿಹಾರ ಭತ್ಯೆ 1,000 ರೂಪಾಯಿ ಇತ್ತು. ಇದನ್ನು 2 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಇದೇ ರೀತಿ ಪೊಲೀಸ್ ಪೇದೆಗಳಿಗೆ ಇದ್ದ 2 ಸಾವಿರ ರೂ. ಭತ್ಯೆಯನ್ನು 3 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.