ಬೆಂಗಳೂರು : ರಾಜ್ಯದಲ್ಲಿ ಆಸ್ತಿ ನೋಂದಣಿಗೆ ನೀಡಿದ ಶೇ. 10 ರಷ್ಟು ರಿಯಾಯಿತಿಯನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನೋಂದಣಿಯಲ್ಲಿ ರಿಯಾಯಿತಿ ನೀಡಿದ್ದರಿಂದ ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದ್ದು, ನಿರೀಕ್ಷೆ ಮೀರಿ ಆದಾಯ ಸಂಗ್ರಹವಾಗಿದೆ ಎಂದು ಹೇಳಿದರು.
ಈ ವರ್ಷದ ಬಜೆಟ್ ನಲ್ಲಿ ಆಸ್ತಿ ನೋಂದಣಿಯ ಮೂಲಕ 14 ಸಾವಿರ ಕೋಟಿ ರೂ. ಸಂಗ್ರಹಿಸಲು ಕಂದಾಯ ಇಲಾಖೆ ನಿರ್ಧರಿಸಿತ್ತು. ಆದರೆ ಈ ಪ್ರಮಾಣವನ್ನು ನಾವು ಅಧಿಕಾರಿಗಳ ಜತೆ ಚರ್ಚಿಸಿ 15 ಸಾವಿರ ಕೋಟಿ ರೂ. ಏರಿಸಿದೆವು. ಆದರೆ ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಐದೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಸಂಗ್ರಹವಾಗಿದೆ ಎಂದು ವಿವರಣೆ ನೀಡಿದರು.
ಈ ಮಧ್ಯೆ ಆಸ್ತಿ ನೋಂದಣಿಯ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಪದೇ ಪದೇ ಎದುರಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ತೀರ್ಮಾನಿಸಲಾಗಿದ್ದು 406 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸರ್ವರ್ ಸರಿಯಿದ್ದರೆ ಆಪರೇಟರ್ ಸರಿಯಿಲ್ಲ, ಆಪರೇಟರ್ ಸರಿಯಿದ್ದರೆ ಸರ್ವರ್ ಸಿಗುವುದಿಲ್ಲ ಎಂಬ ದೂರುಗಳು ಹೆಚ್ಚಿದ್ದು, ಇದಕ್ಕೆ ಕಂಪ್ಯೂಟರ್ ಮತ್ತು ಆಪರೇಟರ್ ಬೇರೆ ಬೇರೆ ಕಂಪನಿಗಳಿಂದ ನಿಯುಕ್ತರಾಗಿರುವುದೇ ಕಾರಣ. ಹೀಗಾಗಿ ಇನ್ನು ಮುಂದೆ ಕಂಪ್ಯೂಟರ್ ಗಳನ್ನು ಒಂದೇ ಸಂಸ್ಥೆಯಿಂದ ಪೂರೈಸುವುದಲ್ಲದೆ, ಆಪರೇಟರ್ ಕೂಡಾ ಅದೇ ಸಂಸ್ಥೆಯವರಾಗಿರುತ್ತಾರೆ. ಹೀಗೆ ಬಿಓಟಿ ಆಧಾರದ ಮೇಲೆ ಜವಾಬ್ದಾರಿ ಹೊರುವ ಸಂಸ್ಥೆ ಪ್ರತಿ ಆಸ್ತಿ ನೋಂದಣಿಗೆ ನಿರ್ದಿಷ್ಟ ಪ್ರಮಾಣದ ಶುಲ್ಕ ಪಡೆಯಲಿದೆ. ಹೀಗೆ ಎಲ್ಲವನ್ನೂ ಒಂದೇ ಸಂಸ್ಥೆಗೆ ವಹಿಸಿಕೊಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ಸಚಿವರು ಹೇಳಿದರು.
ಶಿಕಾರಿಪುರದಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರು ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವತ: ಯಡಿಯೂರಪ್ಪ ಅವರೇ ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ವಯಸ್ಸಿನ ಕಾರಣದಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸದೆ ಇರಬಹುದು. ಆದರೆ ಚುನಾವಣೆಯಲ್ಲಿ ಪಕ್ಷದ ಜೊತೆಗೆ ನಿಂತು ಕೆಲಸ ಮಾಡಲಿದ್ದಾರೆ ಎಂದರು.
ಓದಿ :ಕೆಎಸ್‌ಆರ್‌ಟಿಸಿಯ ಏಕೈಕ ಆಸ್ಪತ್ರೆ ಖಾಸಗೀಕರಣ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಪ್ ಮುಖಂಡ ಕಿಡಿ