ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 'ಹೆಲ್ತ್ ರಿಜಿಸ್ಟರ್' ನಿರ್ವಹಣೆ ಮಾಡಲು ನಿರ್ಧಾರ : ಸಚಿವ ಡಾ.ಕೆ.ಸುಧಾಕರ್

ಭಾರತದಲ್ಲಿ ಹೊಸ ಮಾದರಿ ಎಂಬಂತೆ ಆಶಾ ಕಾರ್ಯಕರ್ತರು ಹಾಗೂ ಖಾಸಗಿ ಆಸ್ಪತ್ರೆಗಳ ಸಹಕಾರದಲ್ಲಿ ರಾಜ್ಯದಲ್ಲಿರುವ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಅವರ ಆರೋಗ್ಯ ಸ್ಥಿತಿಗತಿಯನ್ನು ಸಂಗ್ರಹಿಸುವ ಸಮೀಕ್ಷೆಯೊಂದನ್ನು ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಸಮೀಕ್ಷೆ ಪ್ರಾರಂಭಿಸಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.

The State government has decided to maintain health register: : Minister Sudhakar
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

By

Published : May 27, 2020, 5:14 PM IST

ಬೆಂಗಳೂರು :ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸ್ಥಿತಿಗತಿ ಸಮೀಕ್ಷೆ ನಡೆಸುವ ಮೂಲಕ 'ಹೆಲ್ತ್ ರಿಜಿಸ್ಟರ್' ನಿರ್ವಹಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಹೆಲ್ತ್ ರಿಜಿಸ್ಟರ್ ಬಗ್ಗೆ 18 ವಿಭಾಗದಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ ತಜ್ಞ ವೈದ್ಯರ ಜೊತೆ ವಿಧಾನಸೌಧದಲ್ಲಿ ಇಂದು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು, ಈ ಸಮೀಕ್ಷೆಯಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು. ವಿಶ್ವದ ಕೆಲವು ದೇಶಗಳಲ್ಲಿ ಈ ರೀತಿಯ ಸಮೀಕ್ಷೆ ಇದೆ. ಭಾರತದಲ್ಲಿ ಯಾವ ರಾಜ್ಯದಲ್ಲೂ ಸಮೀಕ್ಷೆ ನಡೆದಿಲ್ಲ ಎಂದ ಅವರು, ಎಲ್ಲರ ಆರೋಗ್ಯದ ಮಾಹಿತಿಯನ್ನು ಪಡೆದು ರಿಜಿಸ್ಟರ್ ಮಾಡಲು ಚರ್ಚೆ ನಡೆಸಲಾಗಿದೆ ಎಂದರು.

ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆ :

ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಸಮೀಕ್ಷೆ ಪ್ರಾರಂಭಿಸಲಾಗುವುದು. ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯ ರಿಜಿಸ್ಟರ್ ನಿರ್ವಹಣೆ ಮಾಡಲಾಗುವುದು. ಇದರಿಂದ ಆರೋಗ್ಯ ಸೇವೆಯಲ್ಲಿ ಸುಧಾರಣೆ ಸಾಧ್ಯ ಮತ್ತು ಬಜೆಟ್​ನಲ್ಲಿ‌ ಅನುದಾನ ನಿಗದಿಗೂ ಅನುಕೂಲವಾಗಲಿದೆ ಎಂದು ಹೇಳಿದರು. ಸಮೀಕ್ಷೆಗೆ ದೀರ್ಘ ಕಾಲಬೇಕಿದೆ, ಆದರೂ ಈಗ ಆರಂಭಿಸುತ್ತೇವೆ. ಆಶಾ ಕಾರ್ಯಕರ್ತರು, ಖಾಸಗಿ ಆಸ್ಪತ್ರೆಗಳ ಸಹಕಾರದಲ್ಲಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದ ಸಚಿವರು, ಸಮೀಕ್ಷೆಗೆ ಪ್ರಶ್ನಾವಳಿಗಳನ್ನು ಎರಡು ಮೂರು ದಿನಗಳಲ್ಲಿ ಸಿದ್ದಪಡಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಆಹಾರ, ನೀರು ಯಾವ ರೀತಿ ಇರಬೇಕು ಎಂಬ ಮಾಹಿತಿಯೂ ಸಮೀಕ್ಷೆ ಒಳಗೊಂಡಿರುತ್ತದೆ. ಜನ ಸಮೀಕ್ಷೆಯ ವೇಳೆ ಸಮಗ್ರ ಮಾಹಿತಿ ಹಂಚಿಕೊಳ್ಳಬೇಕು ಎಂದು ಹೇಳಿದರು. ಸಮೀಕ್ಷೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಚರ್ಚೆ ನಡೆದಿದೆ. ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಎಲ್ಲ ಆಯಾಮಗಳಿಂದ ಚರ್ಚೆ ನಡೆಸಲಾಗುವುದು. ಇದಲ್ಲದೇ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಲಾಗಿದೆ. ಏಕರೂಪ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಇದೆ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಾವೇದ್​ ಅಖ್ತರ್​​​, ಖ್ಯಾತ ವೈದ್ಯರಾದ ಡಾ ಜವಳಿ, ಡಾ.ಪ್ರಭುದೇವ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಧಿಕಾರಿಗಳೊಂದಿಗೆ ಸಚಿವ ಡಾ.ಕೆ. ಸುಧಾಕರ್

ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡು, ಬಲಿದಾನ ಆದವರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ. ವೀರ ಸಾವರ್ಕರ್ ಅವರು ದೇಶದಕ್ಕಾಗಿ ಬಲಿದಾನ ಆಗಿದ್ದಾರೆ. ಇಂತಹ ನಿರ್ಧಾರಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಹೊಸದೇನು ಇಲ್ಲ ಎಂದು ಹೇಳಿದರು.

ABOUT THE AUTHOR

...view details