ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕೂ ಮುನ್ನ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ 'ಸಾಂಸ್ಕೃತಿಕ ಹಬ್ಬ' ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬ್ರಾಂಡ್ ಬೆಂಗಳೂರು ಅಡಿ ನಗರದ ದಶ ದಿಕ್ಕುಗಳಲ್ಲಿ ಸಂಭ್ರಮ ಜತೆಗೆ ಹಬ್ಬದ ವಾತಾವರಣ ನಿರ್ಮಾಣ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಕ್ರೀಡೆ, ಎತ್ತಿನ ಬಂಡಿ, ಸೈಕಲ್, ದ್ವಿಚಕ್ರ ವಾಹನ ಜಾಥಾ, ಕಾರುಗಳ ರ್ಯಾಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ವಿಧಾನಸೌಧದಲ್ಲಿ ಇಂದು ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ಈ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯ ನಂತರ ಮಾದ್ಯಮದವರಿಗೆ ಮಾಹಿತಿ ನೀಡಿದ ಅಬಕಾರಿ ಸಚಿವ ಗೋಪಾಲಯ್ಯ, ಮಾರ್ಚ್ 24 ಮತ್ತು 25ರಂದು ಬೆಂಗಳೂರು ಹಬ್ಬ ನಡೆಯಲಿದ್ದು, ಮೊದಲ ದಿನ ವಿಧಾನಸೌಧ ಮುಂಭಾಗ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ರಾಜಧಾನಿಯ ಮನೆ ಹಬ್ಬ: ಕಬ್ವನ್ ಪಾರ್ಕ್, ಲಾಲ್ ಬಾಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ನಗರದ ಎಲ್ಲ ಪಾರ್ಕ್, ಕೆರೆ, ಐತಿಹಾಸಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ಇದೊಂದು ರೀತಿ ರಾಜಧಾನಿಯ ಮನೆ ಮನೆಯ ಹಬ್ಬವಾಗಲಿದೆ. ಫುಡ್ ಫೆಸ್ಟಿವಲ್, ಚಿತ್ರಕಲಾ ಸ್ಪರ್ಧೆ, ಪುಸ್ತಕ ಜಾತ್ರೆ ಎಲ್ಲವೂ ಇರಲಿದೆ. ಖ್ಯಾತ ಕಲಾವಿದರು, ನಟರು, ಸಾಂಸ್ಕೃತಿಕ ದಿಗ್ಗಜರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಎರಡು ದಿನಗಳ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ತೋಟಗಾರಿಕೆ ಸಚಿವ ಮುನಿರತ್ನ, ಅಧಿಕಾರಿಗಳಾದ ಅನಿಲ್ ಕುಮಾರ್, ಪ್ರತಾಪ್ ರೆಡ್ಡಿ, ಮಂಜುಳಾ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.