ಕರ್ನಾಟಕ

karnataka

ETV Bharat / state

'ಜಾತಿ ಜನಗಣತಿ ಸಮೀಕ್ಷೆ ನಡೆಸುವ ಅಧಿಕಾರ ರಾಜ್ಯಕ್ಕಿಲ್ಲ'

ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ ನಡೆಸುವ ಅಧಿಕಾರವಿಲ್ಲ. ಜನಗಣತಿ ಕಾರ್ಯ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ವಿಚಾರ ಎಂದು ಹೈಕೋರ್ಟ್​ಗೆ ಕೇಂದ್ರದ ಪರ ವಕೀಲರು ಹೇಳಿದ್ದಾರೆ.

ಹೈಕೋರ್ಟ್
ಹೈಕೋರ್ಟ್

By

Published : Aug 10, 2020, 11:28 PM IST

ಬೆಂಗಳೂರು:ಜಾತಿ ಜನಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ಸ್ಪಷ್ಟಪಡಿಸಿದೆ.

2015ರಲ್ಲಿ‌ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು‌ ರಾಜ್ಯದಲ್ಲಿ ನಡೆಸಿದ್ದ ಜಾತಿ ಗಣತಿಯನ್ನು ಪ್ರಶ್ನಿಸಿ ಬೀದರ್​ನ ಶಿವರಾಜ ಕಣಶೆಟ್ಟಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ‌ ನೇತೃತ್ವದ ವಿಭಾಗೀಯ ಪೀಠಕ್ಕೆ, ಕೇಂದ್ರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರಗಳಿಗೆ ಜನಗಣತಿ ನಡೆಸುವ ಅಧಿಕಾರವಿಲ್ಲ. ಜನಗಣತಿ ಕಾರ್ಯ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ವಿಚಾರ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ಜಾತಿಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಹೀಗಾಗಿ ಜಾತಿ ಗಣತಿ ಪೂರ್ಣಗೊಳಿಸಿರುವ ರಾಜ್ಯ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲಿದೆಯೇ ಹಾಗೂ ಜಾತಿ ಗಣತಿಯ ಅಧಿಸೂಚನೆ ಹೊರಡಿಸಲಿದೆಯೇ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು‌‌ ಪ್ರಶ್ನಿಸಿದ್ದು, ಆ.26 ರೊಳಗೆ ಈ ಕುರಿತು ನಿಮ್ಮ ನಿಲುವು ತಿಳಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ : ಜಾತಿ ಜನ ಗಣತಿ ಆರಂಭದಲ್ಲೇ ಸರ್ಕಾರದ ಕ್ರಮ ವಿರೋಧಿಸಿ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರು ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸದಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ವೇಳೆ ಪ್ರತಿವಾದ ಮಂಡಿಸಿದ್ದ ರಾಜ್ಯ ಸರ್ಕಾರ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಜಾತಿ ಜನಗಣತಿ ನಡೆಸುತ್ತಿಲ್ಲ. ಬದಲಾಗಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಲಿದೆ ಎಂದು ಕೋರ್ಟ್‍ಗೆ ತಿಳಿಸಿತ್ತು. ಈ ಹೇಳಿಕೆ ದಾಖಲಿಸಿಕೊಂಡಿದ್ದ ಹೈಕೋರ್ಟ್ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿತ್ತು.

ABOUT THE AUTHOR

...view details