ಬೆಂಗಳೂರು:ರಾಜ್ಯ ಬಜೆಟ್ನಲ್ಲಿ ಯಾವುದೇ ಕ್ಷೇತ್ರಕ್ಕೂ ಆದ್ಯತೆ ನೀಡುವ ಕಾರ್ಯ ಆಗಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ನಲ್ಲಿ ಏನೂ ಇಲ್ಲ. ಮಹದಾಯಿಯ ಕ್ರೆಡಿಟ್ ಇವರು ತೆಗದುಕೊಳ್ಳೋಕೆ ಹೊರಟಿದ್ದಾರೆ. ಮಹದಾಯಿಗೆ ಇವರ ಕೊಡುಗೆ ಏನಿದೆ? ಮೋದಿಯನ್ನು ಕರೆ ತಂದು ಸಭೆ ಮಾಡ್ತಾರಂತೆ. ಮಹದಾಯಿ ವಿಚಾರದಲ್ಲಿ ಕೇಂದ್ರ ಮತ್ತು ಬಿಜೆಪಿಯ ಯಾವ ಕೊಡುಗೆ ಕೂಡ ಇಲ್ಲ. ಈಗ ಕೊಟ್ಟಿರುವ 500 ಕೋಟಿ ಯಾವುದಕ್ಕೂ ಕೂಡ ಸಾಲದು. ಎರಡು ವರ್ಷಗಳ ಒಳಗಾಗಿ ಇದನ್ನು ಮುಗಿಸಬೇಕು. ಒಂದೇ ಒಂದು ಹೊಸ ಕಾರ್ಯಕ್ರಮಗಳನ್ನೂ ಕೂಡ ಕೊಟ್ಟಿಲ್ಲ ಎಂದರು.
ಹಸಿರು ಶಾಲು ಹಾಕ್ಕೊಂಡು ಬಿಟ್ಟರೆ ರೈತರ ಅಭಿವೃದ್ಧಿಯಾಗುತ್ತಾ? ನಾನು ರೈತನ ಮಗ ಅಂತಾ ಹಸಿರು ಶಾಲು ಹಾಕ್ಕೊಂಡು ಬಿಟ್ರೆ ಸಾಕಾಗುತ್ತಾ.? ನಿಮ್ಮ ಬಜೆಟ್ನಲ್ಲಿ ರೈತರಿಗೇನಾದ್ರು ಅನುಕೂಲ ಇದಿಯಾ? ನಾನು ಕೂಡಾ ರೈತ ಕುಟುಂಬದವನೇ. ನಾನು ಮೂರು ವರ್ಷ ಹಸಿರು ಶಾಲು ಹಾಕಿದ್ದೆ. ಆದ್ರೆ ರೈತರಿಗೆ ಭ್ರಮೆ ಹುಟ್ಟಿಸೋ ಕೆಲಸ ಮಾಡಿಲ್ಲ ಎಂದರು. ಇನ್ನು ಅಲ್ಪಸಂಖ್ಯಾತರಿಗೆ ಒಂದೇ ಒಂದು ರೂಪಾಯಿ ಕೊಡ್ತೀವಿ ಅಂತ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇನ್ನು ರೈತ ವಿರೋಧಿಯಾಗಿರುವ ಆಯವ್ಯಯ ನೀರಾವರಿಗೆ ಆದ್ಯತೆ ಕೊಟ್ಟಿಲ್ಲ. ಆರು ವಲಯ ಮಾಡಿದ್ದೇವೆ ಅಂತಾ ಹೆಸರು ಕೊಟ್ಟಿದ್ದಾರೆ ಹೊರತು ಬೇರೇನಿಲ್ಲ. ಈ ಬಜೆಟ್ಗೆ ಯಾವುದೇ ಮುನ್ನೋಟ ಇಲ್ಲ. 8,700 ಕೋಟಿ ಬೆಂಗಳೂರಿಗೆ ಮೀಸಲಿಟ್ಟಿದ್ದೀವಿ ಅಂದಿದ್ದಾರೆ. ಆದರೆ ಹಳೇ ಯೋಜನೆಗಳನ್ನೆಲ್ಲ ಸೇರಿ ಹೇಳಿದ್ದಾರಷ್ಟೆ. ಇನ್ನು ಪೆರಿಫೆರಲ್ ರಿಂಗ್ ರೋಡ್ ಬಗ್ಗೆ ಎಲ್ಲಿಯೂ ಪ್ರಸ್ತಾಪ ಇಲ್ಲ.
ಬೆಂಗಳೂರಿನ ಚಿತ್ರವನ್ನು ಆರು ತಿಂಗಳಲ್ಲಿ ಬದಲಾಯಿಸ್ತೀನಿ ಅಂತಿದ್ರು. ಆದರೆ ಏಳು ತಿಂಗಳಾದ್ರೂ ಏನಾದ್ರೂ ಬದಲಾವಣೆ ಕಾಣ್ತಿದೆಯಾ? ಸಬ್ ಅರ್ಬನ್ ರೈಲಿಗೆ ಇವರು 500 ಕೋಟಿ ಕೊಟ್ಟಿದ್ದಾರೆ. ಆದರೆ ಕೇಂದ್ರದವರು ಕೇವಲ 1 ಕೋಟಿ ಇಟ್ಟಿದ್ದಾರೆ. ಇನ್ನು ರಾಜ್ಯದ ಅಭಿವೃದ್ಧಿಗೆ ಸಾಲ ತೆಗೆದುಕೊಳ್ಳಲೇಬೇಕು. ಆದರೆ ಜಿಡಿಪಿ ಪ್ರಮಾಣವನ್ನೂ ನೋಡಬೇಕು ಎಂದರು.