ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಬೆಂಗಳೂರು :ಹುಲಿ ಉಗುರಿನ ಪೆಂಡೆಂಟ್ ಹೊಂದಿರುವ ಆರೋಪದಡಿ ನಟರ ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿದ್ದ ರಾಜ್ಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಹುಲಿ ಉಗುರು ಎನ್ನಲಾಗುವ ಪೆಂಡೆಂಟ್ನ ನೈಜತೆ ಬಗ್ಗೆ ಖಚಿತಪಡಿಸಿಕೊಳ್ಳಲು ಡೆಹ್ರಾಡೂನ್ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್ )ಕ್ಕೆ ಕಳುಹಿಸಲಾಗಿದೆ ಎಂದು ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.
ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿವಾಸ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ಮತ್ತು ವಿಚಾರಣೆ ನಡೆಸಲಾಗಿದೆ. ವಶಕ್ಕೆ ಪಡೆದ ಉಗುರುಗಳನ್ನ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಹುಲಿಯ ಉಗುರು ಎನ್ನುವುದರ ಬಗ್ಗೆ ಖಾತರಿಯಾಗಲಿದೆ. ನಟರಾದ ನಿಖಿಲ್ ಕುಮಾರಸ್ವಾಮಿ, ದರ್ಶನ್ ಅವರಿಂದ ವಶಕ್ಕೆ ಪಡೆದ ಉಗುರು ಮೇಲ್ನೋಟಕ್ಕೆ ಅಸಲಿ ಅಲ್ಲ ಎಂದು ಅನಿಸುತ್ತಿದೆ. ಹಾಗಾಗಿ ನಾವು ನೈಜತೆಯ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದ್ದು. ಅದನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಜಗ್ಗೇಶ್ ಅವರ ಹಳೆಯ ವಿಡಿಯೋ ಸ್ಟೇಟ್ಮೆಂಟ್ನಡಿ ನಾವು ಕ್ರಮಕೈಗೊಳ್ಳಲು ಆಗಲ್ಲ. ಉಗುರನ್ನು ಬದಲಾಯಿಸಿರುವ ಪ್ರಕರಣ ಕಂಡುಬಂದರೆ ಸಾಕ್ಷಿ ನಾಶದಡಿ ಪ್ರಕರಣ ದಾಖಲಿಸುತ್ತೇವೆ. ಬಂಧಿತನಾಗಿರುವ ಸಂತೋಷ್ ಕೇಸ್ಅಲ್ಲಿ ಹೊಸ ಹುಲಿ ಉಗುರಾಗಿತ್ತು. ಹಾಗಾಗಿ ಬೇಗ ಪತ್ತೆಯಾಯಿತು. ದಾಳಿ ವೇಳೆ ನಕಲಿ ಉಗುರು ಎಂದು ನಮ್ಮ ಅಧಿಕಾರಿಗಳಿಗೆ ದರ್ಶನ್ ಹೇಳಿದ್ದಾರೆ. ಎಲ್ಲವನ್ನು ನಾವು ತನಿಖೆ ಮಾಡುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲರ ಮೇಲೆಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ವಿನಯ್ ಗುರೂಜಿ ಹುಲಿಚರ್ಮದ ಪ್ರಕರಣದ ಬಗ್ಗೆ: ಗೌರಿಗದ್ದೆ ವಿನಯ್ಗುರೂಜಿ ಅವರ ಹುಲಿಚರ್ಮದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳಿಗೆ 2018ರ ವೇಳೆಯಲ್ಲಿ ಶಿವಮೊಗ್ಗದ ಕಡೆಯವರು ನೀಡಿದ್ದರು. ಅದಕ್ಕೆ ಸ್ವಾಮೀಜಿಗಳು ಅರಣ್ಯ ಇಲಾಖೆಯಿಂದ ಅನುಮತಿ ಪತ್ರವನ್ನು ಪಡೆಯಲು ಪ್ರಯತ್ನಿಸಿದ್ದರು. ನಂತರ ಅನುಮತಿ ಸಿಗುವುದಿಲ್ಲ ಎಂಬುದು ತಿಳಿದಮೇಲೆ, ಶಿವಮೊಗ್ಗದ ದಾನಿಗಳಿಗೆ ಮರಳಿಸಿದ್ದಾರೆ. ನಂತರ ಹುಲಿ ಚರ್ಮ ನೀಡಿದವರು ಅದನ್ನು ಶಿವಮೊಗ್ಗದ ವೈಲ್ಢ್ಲೈಫ್ ಇಲಾಖೆಗೆ ಮರಳಿಸಿದ್ದಾರೆ. ಈ ವರ್ಷ ಏಪ್ರಿಲ್ನಲ್ಲಿ ಶಿವಮೊಗ್ಗ ಡಿಎಫ್ಓ ಅವರು ನಮ್ಮ ಚೀಫ್ ವೈಲ್ಡ್ಲೈಫ್ ಅವರ ಅನುಮತಿ ಪಡೆದು ಅದನ್ನು ನಾಶಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಡೆಹ್ರಾಡೂನ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು: ನಿಜವಾದ ಹುಲಿ ಉಗುರೇ ಎಂಬುದನ್ನು ಖಚಿತಪಡಿಸಬೇಕು. ಕೆಲವೊಂದು ಕೇಸ್ನಲ್ಲಿ ಉಗುರುಗಳನ್ನು ನೋಡಿದರೆ ಅದು ಹುಲಿ ಅಥವಾ ಚಿರತೆಯದ್ದು ಇರಬೇಕು ಎಂಬುದು ಕಂಡುಬರುತ್ತದೆ. ಪ್ರತಿಯೊಂದು ಕೇಸ್ನಲ್ಲಿ ನಾವು ಅದನ್ನು ನಿಖರವಾಗಿ ಗುರುತಿಸಲು ಫಾರಾನ್ಸಿಕ್ ಲ್ಯಾಬ್ಗೆ ಕಳುಹಿಸಬೇಕು. ಭಾರತ ಸರ್ಕಾರದ ಅಡಿಯಲ್ಲಿ ಬರುವ ಡೆಹ್ರಾಡೂನ್ನಲ್ಲಿರುವ ವೈಲ್ಡ್ಲೈಫ್ ಫಾರೆನ್ಸಿಕ್ ಇನ್ಸ್ಟಿಟೂಟ್ಗೆ ಸೀಜ್ ಮಾಡಿರುವ ಸಾಮಗ್ರಿಗಳನ್ನು ನಮ್ಮ ತನಿಖಾಧಿಕಾರಿಗಳು ಪ್ರೋಸೆಸ್ ಪ್ರಕಾರ ಮ್ಯಾಜಿಸ್ಟೇಟ್ನಿಂದ ಅನುಮತಿ ಪಡೆದುಕೊಂಡು, ಅಲ್ಲಿಗೆ ಕಳುಹಿಸುತ್ತಾರೆ. ಅಲ್ಲಿಂದ ವರದಿ ಬಂದಮೇಲೆ ಇದು ನಿಜವಾಗಲು ಹುಲಿಯದ್ದೇ ಉಗುರು ಇದೆಯೇ ಎಂಬುದರ ಕುರಿತು ತಿಳಿದುಬರುತ್ತದೆ. ಹುಲಿ, ಚಿರತೆಯ ಉಗುರು ಒಂದೇ ರೀತಿ ಕಂಡುಬರುತ್ತದೆ. ಇವೆಲ್ಲಾ ನೋಡಿಕೊಂಡು ನಾವು ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ : ನಟ ದರ್ಶನ್, ಜಗ್ಗೇಶ್ ಸೇರಿ ಹಲವರ ವಿರುದ್ಧ ದೂರು..