ಬೆಂಗಳೂರು : ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಹಲವು ದಿನಗಳಿಂದ ಮುಂದೂಡುತ್ತಿರುವ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಎರಡನೇ ಪಟ್ಟಿ ಬಗ್ಗೆ ಇನ್ನೂ ಚರ್ಚೆ ಮಾಡಬೇಕಿದೆ. ಸ್ವಲ್ಪ ನಿಧಾನ ಆಗಲಿದೆ ಎಂದು ಹೇಳಿದ್ದಾರೆ. ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯಕ್ಕೆ ಪಂಚರತ್ನ ರಥಯಾತ್ರೆಯಲ್ಲಿ ಬ್ಯುಸಿಯಾಗಿದ್ದೇನೆ. ಸಮಯ ನೋಡಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಅಡೆ ತಡೆಗಳಿಲ್ಲದೇ ಶೀಘ್ರದಲ್ಲೆ ಪಟ್ಟಿ ಬಿಡುಗಡೆ :ನಿನ್ನೆ ಪಂಚರತ್ನ ರಥಯಾತ್ರೆ ಮುಗಿಸಿ ಬರುವುದು ತಡರಾತ್ರಿಯಾಗಿದೆ. ಇಂದೂ ಬಳ್ಳಾರಿ, ಮುಳಬಾಗಿಲಿನಲ್ಲಿ ರಥಯಾತ್ರೆ ಇದ್ದು, ಅಲ್ಲಿಗೆ ತೆರಳುತ್ತಿದ್ದೇನೆ. ಜೆಡಿಎಸ್ ಎರಡನೇ ಪಟ್ಟಿ ಸಂಪೂರ್ಣವಾಗಿ ಸಿದ್ದವಾಗಿದೆ. ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡಿದ್ದೇನೆ. ಪಟ್ಟಿ ಬಿಡುಗಡೆ ಮಾಡಬೇಕಿದೆ ಅಷ್ಟೇ. ಯಾವುದೇ ಅಡೆ ತಡೆಗಳಿಲ್ಲದೇ ಶೀಘ್ರದಲ್ಲೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ: 93 ಅಭ್ಯರ್ಥಿಗಳ ಹೆಸರು ಘೋಷಣೆ
ಚುನಾವಣಾ ಆಯೋಗಕ್ಕೆ ಟ್ವೀಟ್ ಸಂಬಂಧ ಜೆಡಿಎಸ್ ದೂರು : ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ .ಡಿ. ಕುಮಾರಸ್ವಾಮಿ ಅವರ ವಿರುದ್ಧ ಟ್ವಿಟರ್ ಬಳಕೆದಾರರೊಬ್ಬರು ಮಾಡಿರುವ ಟ್ವೀಟ್ಗೆ ಸಂಬಂದಪಟ್ಟಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಜೆಡಿಎಸ್, ಟ್ವಿಟರ್ ಬಳಕೆದಾರರ ಖಾತೆಯನ್ನು ತಡೆಹಿಡುವಂತೆ ಮನವಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮತ್ತು ಆ ಪಕ್ಷದ ನಾಯಕರ ಬಗ್ಗೆ ತಪ್ಪು ಸುಳ್ಳು ಮಾಹಿತಿಯನ್ನು ಅಂಜನ್ ಎಂಬುವರು ನೀಡುತ್ತಿದ್ದಾರೆ. ಅವರ ಅಕೌಂಟ್ ಅನ್ನು ತಡೆಹಿಡಿಬೇಕೆಂದು ಕೋರಲಾಗಿದೆ.
ಅಂಜನ್ ಎಂಬ ಖಾತೆದಾರರು ಇತ್ತೀಚೆಗೆ ಟ್ವೀಟ್ ಮಾಡಿ 'ಹೆಚ್.ಡಿ.ಕುಮಾರಸ್ವಾಮಿ ಅವರು. ಸಚಿವ ಆರ್. ಅಶೋಕ್ ಅವರನ್ನು ಶಾಸಕ ಸಾ.ರಾ.ಮಹೇಶ್ ಜೊತೆಗೆ ಭೇಟಿ ಮಾಡಿದ್ದಾರೆ. ಗುಪ್ತವಾಗಿ ಗುಜರಾತ್ನ ಉದ್ಯಮಿಯ ಮೂಲಕ ಪಕ್ಷಕ್ಕೆ ಧನಸಹಾಯ ಪಡೆದು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ನೋಡುತ್ತಿದ್ದಾರೆ' ಎಂದು ಟ್ವಿಟ್ನಲ್ಲಿ ಬರೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಡಿಸೆಂಬರ್ನಲ್ಲಿಯೇ ಬಿಡುಗಡೆಯಾಗಿದ್ದ ಮೊದಲ ಪಟ್ಟಿ: ರಾಜ್ಯ ವಿಧಾನ ಸಭೆ ಚುನಾವಣೆಗೆ 5 ತಿಂಗಳು ಇರುವಾಗಲೇ ಜೆಡಿಎಸ್ ಪಕ್ಷ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 2023 ರ ವಿಧಾನಸಭಾ ಚುನಾವಣೆಗೆ 93 ಜೆಡಿಎಸ್ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಸಮ್ಮುಖದಲ್ಲಿ ಘೋಷಣೆ ಮಾಡಿದ್ದರು. ಇದೇ ಪಟ್ಟಿಯಲ್ಲಿ ತಂದೆ ಮಗನಿಗೂ ಕ್ಷೇತ್ರದ ಘೋಷಣೆಯಾಗಿತ್ತು. ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ನಿಂತರೆ, ಚನ್ನಪಟ್ಟಣದಿಂದ ತಂದೆ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಲಾಗಿತ್ತು.
ಇದನ್ನೂ ಓದಿ:ಸಿಆರ್‌ಪಿಎಫ್ ಪರೀಕ್ಷೆ; ಕನ್ನಡ ನಿರ್ಲಕ್ಷ್ಯಕ್ಕೆ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಆಕ್ರೋಶ, ಮರು ಪರೀಕ್ಷೆಗೆ ಆಗ್ರಹ