ಬೆಂಗಳೂರು: ಬೆಂಗಳೂರಿನ ಜೈನ್ ವಿವಿಯಲ್ಲಿ ಖೇಲೋ ಇಂಡಿಯಾ ಯನಿವರ್ಸಿಟಿ ಗೇಮ್ಸ್ 2022 ಕ್ರೀಡಾಕೂಟ ಆಯೋಜಿಸುವ ಸಂಬಂಧ ಸಿಎಂ ಹಾಗೂ ಕೇಂದ್ರ ರಾಜ್ಯ ಕ್ರೀಡಾ ಸಚಿವ ಕಿರೆನ್ ರಿಜಿಜು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಸಿಎಂ, ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ-2022 ಕ್ರೀಡಾಕೂಟವನ್ನು ಭಾರತ ಸರ್ಕಾರ ಆಯೋಜಿಸಲು ನಿರ್ಧರಿಸಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿನ ಜೈನ್ ವಿವಿಯ ಕ್ಯಾಂಪಸ್‌ನಲ್ಲಿ ಕ್ರೀಡಾಕೂಟ ನಡೆಯಲಿದೆ. ಬಹಳಷ್ಟು ರಾಜ್ಯಗಳ ವಿವಿಗಳ ಕ್ರೀಡಾಪಟುಗಳು ಭಾಗವಹಿಸ್ತಾರೆ. 17 ಕ್ರೀಡೆಗಳಲ್ಲಿ 6 ಸಾವಿರ ಸ್ಪರ್ಧಾಳುಗಳು ಭಾಗವಹಿಸ್ತಾರೆ. ಊಟೋಪಚಾರ, ಆತಿಥ್ಯ, ಇತರೆ ಸೌಕರ್ಯಗಳ ವ್ಯವಸ್ಥೆ ಹೊಣೆ ರಾಜ್ಯ ಸರ್ಕಾರ ಮತ್ತು ವಿವಿಗಳು ನೋಡಿಕೊಳ್ಳಲಿವೆ ಎಂದರು.
ಬಳಿಕ ಮಾತನಾಡಿದ ಕೇಂದ್ರ ಸಚಿವ ಕಿರೆನ್ ರಿಜಿಜು, ನಾವು ಪ್ರತಿ ಬಾರಿ ಮೂರು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಖೇಲೋ ಇಂಡಿಯಾ ಯೂತ್ ಗೇಮ್ಸ್, ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಮತ್ತು ಖೇಲೋ ಇಂಡಿಯಾ ವಿಂಟರ್ಸ್ ಗೇಮ್ ಎಂದು ಮೂರು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಇದೀಗ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಕರ್ನಾಟಕದಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ ಎಂದರು.
ಕರ್ನಾಕಟದ ಜನರು ಕ್ರೀಡಾ ಪ್ರಿಯರಾಗಿದ್ದಾರೆ. ನಮ್ಮದು ಯುವ ಜನರು ಇರುವ ದೇಶವಾಗಿದೆ. ನಾವು ಒಲಿಂಪಿಕ್ಸ್ನಲ್ಲಿ ಅಗ್ರಗಣ್ಯರಾಗಿರಬೇಕು. ಕೇವಲ ಎರಡು ಮೂರು ಪದಕ ಗೆಲ್ಲುವುದರಿಂದ ನಾವು ಸಂತೃಪ್ತರಾಗುವುದಿಲ್ಲ. ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಹಾಗಾಗಿ ಖೇಲೋ ಇಂಡಿಯಾ ಕಾರ್ಯಕ್ರದ ಮೂಲಕ ಯುವ ಜನರನ್ನು ಉತ್ತೇಜಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಮೂಲ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಅಲ್ಲಿ ಬಹು ಕ್ರೀಡಾ ಸ್ಟೇಡಿಯಂ ತಲೆ ಎತ್ತಲಿದೆ. ಕ್ರೀಡಾ ರಂಗದಲ್ಲಿ ಕರ್ನಾಟಕ ಉನ್ನತಿ ಸಾಧಿಸ್ತಿದೆ. ಬೆಂಗಳೂರಿನಲ್ಲಿ ಕ್ರೀಡಾ ಸೌಕರ್ಯ ಅತ್ಯುತ್ತಮವಾಗಿದೆ. ಇದೇ ತರಹದ ಸವಲತ್ತು ಬೇರೆ ರಾಜ್ಯಗಳ ನಗರಗಳಲ್ಲೂ ಇರಬೇಕು ಎಂದರು.
ಈ ಸುದ್ದಿಯನ್ನೂ ಓದಿ:ಅಭಿವೃದ್ಧಿ ಕಾಮಗಾರಿಯನ್ನು ಆದಷ್ಟು ಬೇಗ ಕೈಗೊಳ್ಳಿ: ಸಚಿವ ಜಗದೀಶ್ ಶೆಟ್ಟರ್ ಸೂಚನೆ
ಭಾರತ ಸರ್ಕಾರವು ಆಲ್ ಇಂಡಿಯಾ ಯೂನಿವರ್ಸಿಟಿ ಮತ್ತು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಮೊದಲನೇ ಯುನಿವರ್ಸಿಟಿ ಗೇಮ್ಸ್ 2020ನ್ನು ಮಾರ್ಚ್ನಲ್ಲಿ ಆಯೋಜಿಸಲಾಗಿತ್ತು. ಇದರ ಎರಡನೇ ಆವೃತ್ತಿಯನ್ನು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿರುವ ಜೈನ್ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ವಿವಿಧ ರಾಜ್ಯಗಳ 150 ಯೂನಿವರ್ಸಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಪಂದ್ಯಾವಳಿಯಲ್ಲಿ ನಾಲ್ಕು ಸಾವಿರ ಕ್ರೀಡಾವಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಕ್ರೀಡಾಪಟುಗಳೊಂದಿಗೆ ತಾಂತ್ರಿಕ ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಸೇರಿ ಒಟ್ಟು ಆರು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಸದ್ಯ ಫೆಬ್ರವರಿ/ಮಾರ್ಚ್-2022ರಲ್ಲಿ ಕ್ರೀಡಾಕೂಟ ಆಯೋಜಿಸಲು ಚಿಂತನೆ ಇದೆ. ಆಲ್ ಇಂಡಿಯಾ ಯೂನಿವರ್ಸಿಟಿ ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳೊಂದಿಗೆ ಚರ್ಚಿಸಿ ಅಂತಿಮ ದಿನಾಂಕ ಪ್ರಕಟಿಸಲಾಗುವುದು. 9 ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ. ಕನಕಪುರ ರಸ್ತೆಯಲ್ಲಿರುವ ಜೈನ್ ವಿವಿ ಗ್ಲೋಬಲ್ ಕ್ಯಾಂಪಸ್ ಮತ್ತು ಕ್ರೀಡಾ ಶಾಲೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣಗಳಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದರು.