ಬೆಂಗಳೂರು: ಐಎಂಎ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇನ್ನು ಐಎಂಎ ವಂಚನೆಯಿಂದ ಕೇವಲ ಹುಡಿಕೆದಾರರಷ್ಟೇ ಕಂಗಾಲಾಗಿಲ್ಲ, ಇದೀಗ ಅಕ್ಷರ ಕಲಿಸುವ ಶಿಕ್ಷಕರು ಸಹ ಇದರ ಬಲೆಗೆ ಬೀಳುವ ಮೂಲಕ ತೊಂದರೆ ಅನುಭವಿಸುತ್ತಿದ್ದಾರೆ. ಮೋಸಕ್ಕೆ ಬಲಿಯಾದ ಅಮ್ರಿನಾ ಬೇಗಂ ಎಂಬ ಮುಖ್ಯ ಶಿಕ್ಷಕಿ, ತಮ್ಮ ಮುಂದಿನ ಜೀವನದ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ರಾಹುಲ್ ಅವರಿಗೆ ದೂರು ನೀಡಿದ್ದಾರೆ.
ಐಎಂಎ ಸಂಸ್ಥೆ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಇಲ್ಲಿ 63 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣಕ್ಕೆ ಸಂಬಂಧಪಟ್ಟ ನಮ್ಮ ಎಲ್ಲ ಸರ್ಟಿಫಿಕೇಟ್ಗಳು ಐಎಂಎ ಕಚೇರಿಯಲ್ಲಿವೆ. ಹಾಗಾಗಿ ನಾವು ಬೇರೆ ಕಡೆ ಕೆಲಸ ಹುಡುಕಲು ಕಷ್ಟವಾಗುತ್ತಿದೆ ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಐಎಂಎ ಶಾಲೆಯಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕರು ಒಂದು ತಿಂಗಳು ಸಂಬಳ ಇಲ್ಲದೆ ಕೆಲಸ ಮಾಡಲು ತೀರ್ಮಾನ ಮಾಡಿದ್ದಾರೆ. ಆದರೆ, ಒಂದು ತಿಂಗಳ ನಂತರ ಮುಂದೇನು? ಕೈಯಲ್ಲಿ ಸರ್ಟಿಫಿಕೇಟ್ ಇದ್ದರೆ ಬೇರೆ ಕಡೆ ಕೆಲಸಕ್ಕೆ ಪ್ರಯತ್ನ ಮಾಡಬಹುದು ಎನ್ನುತ್ತಿದ್ದಾರೆ.
ಆದ್ರೆ, 63 ಶಿಕ್ಷಕರು ಕೆಲಸ ಬಿಟ್ಟರೆ ಇಲ್ಲಿನ 1500 ಮಕ್ಕಳ ಭವಿಷ್ಯಕ್ಕೆ ಹೊಣೆ ಯಾರು? ಈ ಶಾಲೆಗೆ ಸರ್ಕಾರದಿಂದ ನೇಮಕ ಆಗಿರೋದು 50 ಶಿಕ್ಷಕರು ಮಾತ್ರ. ಉಳಿದ ಶಿಕ್ಷಕರನ್ನು ಐಎಂಎ ಕಂಪನಿ ನೇಮಿಸಿತ್ತು. ಸರ್ಟಿಫಿಕೇಟ್ ಇಲ್ಲದೆ ಬೇರೆ ಕಡೆ ಕೆಲಸಕ್ಕೂ ಹೊಗಲಾಗದ ಸ್ಥಿತಿ ಇಲ್ಲಿನ ಶಿಕ್ಷಕರಿಗೆ ಇದೆ. ಈ ಮಧ್ಯೆ ಶಾಲಾ ಮುಖ್ಯಸ್ಥೆ ಅಮ್ರಿನಾ ಬೇಗಂ ಅವರಿಗೆ ಅನಾಮಿಕ ಕರೆ ಬರುತ್ತಿದ್ದು, ಹೀಗಾಗಿ ಸರ್ಟಿಫಿಕೇಟ್ ವಿಚಾರ ಹಾಗೂ ಅನಾಮಿಕ ಕರೆ ಕುರಿತು ಡಿಸಿಪಿಗೆ ದೂರು ನೀಡಿದ್ದಾರೆ.