ಕರ್ನಾಟಕ

karnataka

ETV Bharat / state

ರಸ್ತೆ ಪರಿಕಲ್ಪನೆಯಲ್ಲಿ ಕಾಲುದಾರಿ, ಬಂಡಿ ಜಾಡು ಒಳಗೊಂಡಿರಲಿದೆ; ಹೈಕೋರ್ಟ್ - ಸಾರ್ವಜನಿಕರ ಹಕ್ಕು

ರಸ್ತೆ ಪರಿಕಲ್ಪನೆಯಲ್ಲಿ ಕಾಲುದಾರಿ, ಬಂಡಿ ಜಾಡು ಒಳಗೊಂಡಿರಲಿದ್ದು ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನು ಸಹ ನೀಡಲಾಗಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Dec 21, 2023, 7:30 AM IST

ಬೆಂಗಳೂರು: ರಸ್ತೆಗಳು ಪರಿಕಲ್ಪನೆಯಲ್ಲಿ ಪಾದಚಾರಿ ಮಾರ್ಗಗಳು(ಕಾಲುದಾರಿ), ಗಾಡಿಗಳ ದಾರಿ(ಬಂಡಿ ಜಾಡು)ಗಳೂ ಒಳಗೊಂಡಿರುತ್ತವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭೂಸ್ವಾಧೀನ ಕಾಯ್ದೆಯಡಿ ಭೂಮಿ ಸ್ವಾಧೀನಪಡಿಸಿಕೊಂಡ ಮಾತ್ರಕ್ಕೆ ’ಬಿ ಖರಾಬ್’ ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ತಿಳಿಸಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ಧ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ 67ರ ಪ್ರಕಾರ ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ.

ಕಾಲುದಾರಿ ಅಥವಾ ಬಂಡಿ ಜಾಡು ಎಂಬ ಗಾಡಿ ಜಾಡು ಹಿಂದಿನ ರಸ್ತೆಗಳಾಗಿದ್ದು, ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಜನರು ವಿವಿಧ ಪ್ರದೇಶಗಳಿಗೆ ಪ್ರವೇಶಿಸಲು ಬಳಸುತ್ತಿದ್ದರು. ಅಲ್ಲದೇ, ಕಾಲುದಾರಿ ಬಂಡಿ ಜಾಡುವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಜತೆಗೆ, ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು ’ಬಿ ಖರಾಬ್’ ಭೂಮಿ ಎಂದು ವರ್ಗೀಕರಿಸಲಾಗಿದೆ. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನು ಸಹ ನೀಡಲಾಗಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:1999-2000ರ ಅವಧಿಯಲ್ಲಿ ಅರ್ಜಿದಾರ ಎಪಿಎಂಸಿಯ ಅನುಕೂಲಕ್ಕಾಗಿ ಕೆಲವು ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು, ಉಪ ಮಾರುಕಟ್ಟೆಗಾಗಿ ಬಡಾವಣೆ ರಚಿಸಿ, ಕಟ್ಟಡಗಳನ್ನು ನಿರ್ಮಿಸಿದ ಬಳಿಕ ಹಲವು ವ್ಯಕ್ತಿಗಳಿಗೆ ತಮ್ಮ ವ್ಯವಹಾರಗಳನ್ನು ನಡೆಸಲು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, 2019ರ ಫೆಬ್ರವರಿ 5ರಂದು ಕಾಲುದಾರಿ ಮುಚ್ಚಿರುವ ಸಂಬಂಧ ಸ್ಥಳೀಯ ತಹಶೀಲ್ದಾರ್ ಎಪಿಎಂಸಿಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಪಿಎಂಸಿ, ಅರ್ಜಿಗೆ ಸಂಬಂಧಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಲಾಗಿದೆ. ಇಡೀ ಆಸ್ತಿ ಎಪಿಎಂಸಿಗೆ ಸೇರಿದ್ದಾಗಿದ್ದು, ಈ ಜಮೀನಿನಲ್ಲಿ ಯಾವುದೇ ಕಾಲು ದಾರಿ ಇಲ್ಲ ಎಂದು ಉತ್ತರಿಸಿದ್ದರು. ಜತೆಗೆ, ಇದೇ ಅಂಶಗಳನ್ನು ಉಲ್ಲೇಖಿಸಿ ಹೈಕೋರ್ಟ್​​ನಲ್ಲಿ ಅರ್ಜಿ ಸಹ ಸಲ್ಲಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಸರ್ಕಾರದ ಪರ ವಕೀಲರು, ಕೇವಲ 10 ಎಕರೆ 15 ಗುಂಟೆ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಂಡು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿದೆ ಮತ್ತು ಪಕ್ಕದ ಬಿ ಖರಾಬ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿಲ್ಲ ಅಥವಾ ಅರ್ಜಿದಾರರಿಗೆ ವರ್ಗಾಯಿಸಲಾಗಿಲ್ಲ. ಜತೆಗೆ, ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ 68ರ ಪ್ರಕಾರ ’ಬಿ ಖರಾಬ್’ನಲ್ಲಿ ಸಾರ್ವಜನಿಕರ ಹಕ್ಕು ಕಸಿದುಕೊಳ್ಳಲಾಗಿಲ್ಲ. ಆದ್ದರಿಂದ ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕಾಲುದಾರಿ’ ಬಳಸಲು ಅರ್ಹರಾಗಿರುತ್ತಾರೆ. ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು. ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ:ಸ್ವಾಮೀಜಿಗಳು ನ್ಯಾಯಾಲಯಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದರೆ ನ್ಯಾಯಮೂರ್ತಿಗಳು ಏನು ಮಾಡಬೇಕು?: ಹೈಕೋರ್ಟ್

ABOUT THE AUTHOR

...view details