ಬೆಂಗಳೂರು: ಕಳೆದ ಒಂದು ವಾರದಿಂದ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ, ಕಾರ್ಯಕ್ರಮಕ್ಕೂ ಬರುತ್ತಿಲ್ಲ, ಕ್ಷೇತ್ರಕ್ಕೂ ಹೋಗುತ್ತಿಲ್ಲ, ಎಲ್ಲಿದ್ದಾರೆ ಎಂದು ವಿಚಾರಿಸಿದರೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂಬ ಉತ್ತರ ಸಿಕ್ಕಿದೆ.
ಮೈತ್ರಿ ಸರ್ಕಾರ ಪತನ ನಂತರ ಇವರು ಬೇಸರಗೊಂಡು ಮನೆಯಲ್ಲಿ ಕುಳಿತಿದ್ದಾರೆಂಬ ಅನುಮಾನದಿಂದ ವಿಚಾರಿಸಿದಾಗ, ವಾರದಿಂದ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆಂಬ ಅಸಲಿ ಕಾರಣ ತಿಳಿದುಬಂದಿದೆ. ವೈರಲ್ ಜ್ವರದಿಂದ ಬಳಲುತ್ತಿದ್ದು, ಸದಾಶಿವನಗರದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸಲಹೆಯಂತೆ ಮನೆಯಿಂದ ಆಚೆ ಬಾರದೇ ವಿಶ್ರಾಂತಿ ಪಡೆಯುತ್ತಿರುವ ಪರಮೇಶ್ವರ್ ಗುಣಮುಖರಾಗುತ್ತಿದ್ದಾರೆ. ಇನ್ನೂ ಒಂದೆರಡು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನೆರೆ ಹಾಗೂ ಬರದ ಸಮಸ್ಯೆ ಇದ್ದು, ಕಾಂಗ್ರೆಸ್ ನಾಯಕರು ಸಾಲುಸಾಲಾಗಿ ಪ್ರವಾಸ ಕೈಗೊಳ್ಳುತ್ತಿದ್ದು, ಪರಮೇಶ್ವರ್ ಕೂಡ ಕಳೆದ ವಾರದವರೆಗೂ ಪ್ರವಾಸದಲ್ಲಿದ್ದರು. ತಮ್ಮ ಜಿಲ್ಲೆಯಾದ ತುಮಕೂರು ಬರದಿಂದ ತತ್ತರಿಸಿದ್ದು, ಪರಮೇಶ್ವರ್ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದ್ದರು. ಆದರೀಗ ವಾತಾವರಣದ ಬದಲಾವಣೆಯಿಂದಾಗಿ ಎದುರಾಗಿರುವ ವೈರಲ್ ಜ್ವರದಿಂದಾಗಿ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಅನಿವಾರ್ಯವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಎರಡು ದಿನ ಹಿಂದೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ನೆರೆ ಮತ್ತು ಬರದ ಸಮಸ್ಯೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಕೂಡ ಪರಮೇಶ್ವರ್ ಈ ಅನಾರೋಗ್ಯದ ಕಾರಣದಿಂದಾಗಿಯೇ ಕಾಣಿಸಿಕೊಂಡಿರಲಿಲ್ಲ. ಕಾಂಗ್ರೆಸ್ ನಾಯಕರು ಸಾಲುಸಾಲಾಗಿ ವಿಶ್ರಾಂತಿಗೆ ಒಳಗಾಗುತ್ತಿದ್ದು, ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಒಂದು ವಾರಕ್ಕೂ ಹೆಚ್ಚು ಕಾಲ ವಿಶ್ರಾಂತಿ ಪಡೆದಿದ್ದರು. ಇದೀಗ ವಿಶ್ರಾಂತಿ ಪಡೆಯುವ ಸರದಿ ಪರಮೇಶ್ವರ್ ಪಾಲಾಗಿದೆ.