ಕರ್ನಾಟಕ

karnataka

By

Published : May 8, 2020, 9:23 AM IST

ETV Bharat / state

ಕಟ್ಟಡ ನಿರ್ಮಾಣ ಕ್ಷೇತ್ರದ ಚಟುವಟಿಕೆ ಆರಂಭ.. ಜೀವಕಳೆ ಪಡೆದ ರಿಯಲ್ ಎಸ್ಟೇಟ್ ಉದ್ಯಮ!!

ಉತ್ತರಕರ್ನಾಟಕ ಭಾಗದಿಂದ ಹಾಗೂ ಉತ್ತರ ಭಾರತದ ಕೆಲ ರಾಜ್ಯಗಳಿಂದ ವಲಸೆ ಕಾರ್ಮಿಕರು ಮಹಾನಗರದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಧದಷ್ಟು ಮಂದಿ ತಮ್ಮ ಊರುಗಳಿಗೆ ತೆರಳಿದ್ದಾರೆ.

The real estate industry started working again
ಜೀವಕಳೆ ಪಡೆದ ರಿಯಲ್ ಎಸ್ಟೇಟ್ ಉದ್ಯಮ

ಬೆಂಗಳೂರು :ಲಾಕ್‌ಡೌನ್ 3ನೇ ಹಂತಕ್ಕೆ ವಿಸ್ತರಣೆಯಾದರೂ ಕೆಲ ಕ್ಷೇತ್ರಗಳಿಗೆ ಸರ್ಕಾರ ವಿನಾಯಿತಿ ನೀಡುವ ಮೂಲಕ ನಿರಾಳ ಗೊಳಿಸಿದ್ದು, ಇದರಲ್ಲಿ ನಿರ್ಮಾಣ ಕ್ಷೇತ್ರ ಕೂಡ ಒಂದಾಗಿದೆ.

ನಿತ್ಯ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿರುವ ಕಟ್ಟಡ ನಿರ್ಮಾಣ ಕಾಮಗಾರಿಗೆ ಸರ್ಕಾರ ಕೆಲ ಮಿತಿ ಹೇರಿ ನಿರ್ಮಿಸಲು ಅನುಮತಿ ನೀಡಿರುವುದು ಅರ್ಧಕ್ಕೆ ನಿಂತಿದ್ದ ನೂರಾರು ಕಟ್ಟಡಗಳ ಕಾಮಗಾರಿ ಮುಂದುವರಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ನಗರದ ಪ್ರತಿಷ್ಠಿತ ಖಾಸಗಿ ನಿರ್ಮಾಣ ಸಂಸ್ಥೆಗಳು ಹಲವು ಕಡೆ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಲಾಕ್‌ಡೌನ್ ಹಿನ್ನೆಲೆ ಇವೆಲ್ಲವೂ ಸಂಪೂರ್ಣ ನಿಂತು ಹೋಗಿದ್ದವು.

ಕಳೆದ 40 ದಿನಗಳಿಂದ ಇಲ್ಲಿ ಕೆಲಸವನ್ನು ಅವಲಂಬಿಸಿದ್ದ ಕಾರ್ಮಿಕರಿಗೆ ಕೂಲಿ ಇಲ್ಲದಂತಾಗಿತ್ತು. ಈ ಹಿನ್ನೆಲೆ ಹಲವರು ತಮ್ಮ ಊರುಗಳತ್ತ ತೆರಳಲು ಕೂಡ ಮುಂದಾಗಿದ್ದರು. ಕೇವಲ ದೊಡ್ಡ ದೊಡ್ಡ ಯೋಜನೆಗಳು ಮಾತ್ರವಲ್ಲ ಸಣ್ಣಪುಟ್ಟ ಮನೆ ರಿಪೇರಿ ಹಾಗೂ ನಿರ್ಮಾಣ ಕಾಮಗಾರಿಗಳು ಕೂಡ ಅರ್ಧಕ್ಕೆ ನಿಂತಿದ್ದವು. ಇದೀಗ ಕಾಮಗಾರಿ ಆರಂಭವಾಗಿದ್ದು, ನಿರ್ಮಿಸುತ್ತಿರುವ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೂ ಹೊಸ ಜೀವಕಳೆ ಬಂದಿದೆ.

ಉತ್ತರಕರ್ನಾಟಕ ಭಾಗದಿಂದ ಹಾಗೂ ಉತ್ತರ ಭಾರತದ ಕೆಲ ರಾಜ್ಯಗಳಿಂದ ವಲಸೆ ಕಾರ್ಮಿಕರು ಮಹಾನಗರದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಧದಷ್ಟು ಮಂದಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಆದರೆ, ಉಳಿದಿರುವ ಇನ್ನರ್ಧ ಮಂದಿ ಊರಿಗೆ ತೆರಳಿದರೂ ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಇದೆ. ಈ ಹಿನ್ನೆಲೆ ನಗರದಲ್ಲಿ ಸರ್ಕಾರ ಹಾಗೂ ವಿವಿಧ ಖಾಸಗಿ ಸಂಸ್ಥೆಗಳು ನೀಡುವ ಹಾಗೂ ಉಪಹಾರ ನಂಬಿಕೊಂಡು ಉಳಿದುಕೊಂಡಿದ್ದರು. ಇದೀಗ ಎಂಥವರಿಗೂ ದುಡಿದು ತಿನ್ನುವ ಅವಕಾಶ ಒದಗಿ ಬಂದಿದೆ.

ಬೆಂಗಳೂರಿನ ಗಾಂಧಿನಗರದ ಖಾಸಗಿ ವಸತಿ ಸಮುಚ್ಚಯ ನಿರ್ಮಾಣದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಉತ್ತರ ಭಾರತ ಮೂಲದ ಸಚಿನ್ ಎಂಬ ಯುವಕ ತನ್ನ ಸ್ವಂತ ಊರಿಗೆ ತೆರಳಲು ಆಗದೆ ಇಲ್ಲಿಯೂ ದುಡಿದು ತಿನ್ನಲಾಗದೆ ಬೇಸರಗೊಂಡಿದ್ದ. ಇದೀಗ ನಿರ್ಮಾಣ ಕಾಮಗಾರಿಗಳಲ್ಲಿ ಕೆಲವಷ್ಟು ಜನರನ್ನು ಬಳಸಿಕೊಂಡು ಕಾರ್ಯ ಆರಂಭಿಸಲು ಸರ್ಕಾರ ಸಮ್ಮತಿ ನೀಡಿರುವ ಹಿನ್ನೆಲೆ ಈತನಿಗೂ ದಿನದ ಕೂಲಿ ಸಿಗುತ್ತಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸ್ವಂತ ದುಡಿಮೆಯ ಅನ್ನ ತಿನ್ನುತ್ತಿರುವುದು ತುಂಬಾ ಸಮಾಧಾನ ಅನ್ನಿಸುತ್ತಿದೆ. ಇಷ್ಟು ದಿನ ಯಾರೋ ನೀಡಿದ ಊಟ ಉಪಹಾರವನ್ನು ಜೀವ ಹಿಡಿದುಕೊಂಡಿರುವ ಸಲುವಾಗಿ ಸೇವಿಸಬೇಕಾಗಿತ್ತು. ಮನಸ್ಸು ಒಪ್ಪದಿದ್ದರೂ ಬದುಕಬೇಕೆಂಬ ಕಾರಣಕ್ಕೆ ಆಹಾರ ಬೇರೆಯವರಿಂದ ಪಡೆದು ಸೇವಿಸುತ್ತಿದ್ದೆ. ಆದರೆ, ಇದೀಗ ನನ್ನ ದುಡಿಮೆಯಲ್ಲಿ ಅನ್ನ ತಿನ್ನುತ್ತಿರುವುದು ಸಮಾಧಾನ ಇದೆ ಎನ್ನುತ್ತಾರೆ.

ಪ್ರತಿಷ್ಠಿತ ಖಾಸಗಿ ನಿರ್ಮಾಣ ಸಂಸ್ಥೆಯೊಂದರ ವ್ಯವಸ್ಥಾಪಕ ಜಗದೀಶ್ ಪ್ರಕಾರ, ಕಳೆದ 40 ದಿನಗಳಿಂದ ಕಾಮಗಾರಿ ನಡೆಯದ ಹಿನ್ನೆಲೆ ನಮ್ಮ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಒಟ್ಟಾರೆ ಈ ಕ್ಷೇತ್ರಕ್ಕೆ ಸಾವಿರಾರು ಕೋಟಿಗಳ ನಷ್ಟ ಎದುರಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೇರಾ ಕಾಯ್ದೆ ಜಾರಿ, ನೋಟು ಅಮಾನ್ಯೀಕರಣ ಮತ್ತಿತರ ಕಾರಣಗಳಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಆಘಾತ ಎದುರಾಗಿತ್ತು.

ಇದರಿಂದ ಕೊಂಚ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ದೇಶಕ್ಕೆ ಕೊರೊನಾ ಮಹಾಮಾರಿ ವಕ್ಕರಿಸಿ ಇನ್ನಷ್ಟು ಅತಂಕ ತಂದಿಟ್ಟಿದೆ. ಇದೀಗ ಸರ್ಕಾರ ನಿರ್ಮಾಣ ಕಾಮಗಾರಿಗೆ ಪರವಾನಗಿ ನೀಡಿರುವುದು ಕೊಂಚ ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ. ಸೀಮಿತ ಸಂಖ್ಯೆಯಲ್ಲಿ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗೆ ಪರವಾನಗಿ ನೀಡಿರುವುದು ಕ್ಷೇತ್ರದ ಹಾಗೂ ಇಲ್ಲಿ ದುಡಿಯುವ ಕಾರ್ಮಿಕರಲ್ಲಿ ಒಂದಿಷ್ಟು ಸಮಾಧಾನ ತಂದಿದೆ.

ABOUT THE AUTHOR

...view details