ಬೆಂಗಳೂರು :ಇಂದಿನ ಪ್ರಧಾನಿಗಳ ಭಾಷಣ ರಾಜಕೀಯವಾಗಿತ್ತು. ಜನರ ಹಿತಕ್ಕಾಗಿ ಸರ್ಕಾರ ಮಾಡಬೇಕಾದ ಯಾವ ಕೆಲಸದ ಬಗ್ಗೆ ಅವರು ಮಾತನಾಡಲೇ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಲಾಕಡೌನ್‌ಗೆ ನಮ್ಮ ಬೆಂಬಲ ಇದೆ. ಬಡವರು, ನಿರ್ಗತಿಕರಿಗೆ ಹಲವು ಕಾರ್ಯಕ್ರಮ ಕೊಡ್ತಾರೆ ಅನ್ನೋ ಆಪೇಕ್ಷೆ ಇತ್ತು. ಕಡುಬಡವರಿಗೆ ಏನಾದರೂ ಒಂದು ಉಪಾಯ ಕೊಡ್ತಾರೆ ಅಂದುಕೊಂಡಿದ್ವಿ. ಆದರೆ, ಅಂತಹ ಯಾವ ವಿಚಾರಗಳು ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪವಾಗಲಿಲ್ಲ ಎಂದರು.
ಲಾಕ್‌ಡೌನ್ ಸಿಂಗಾಪುರ್ ರೀತಿ ವ್ಯವಸ್ಥಿತವಾಗಿ ಮಾಡಬೇಕಿತ್ತು. ಒಂದು ವಾರದ ಮುಂಚೆಯೇ ಜನರಿಗೆ ಮಾಹಿತಿ ಕೊಟ್ಟಿದ್ರೆ ಬಡ ಕೂಲಿ ಕಾರ್ಮಿಕರಿಗೆ ಅನುಕೂಲ ಆಗ್ತಿತ್ತು. ನೀವು ಸಮಯ ಕೊಟ್ಟಿದ್ರೆ ಜನ ಊರುಗಳಿಗೆ ಸೇರುತ್ತಿದ್ದರು. ದಾರಿ ಮಧ್ಯದಲ್ಲಿ ಸಾವು ನೋಡುವ ಅವಶ್ಯಕತೆ ಇರಲಿಲ್ಲ. ವರ್ಕರ್ಸ್ ವೆಲ್ ಫೇರ್ ಫಂಡ್‌ನ ಬಳಸಿ ಒಂದು ಪಕ್ಷದ ಜನ ರೇಷನ್ ಇನ್ನಿತರ ವಸ್ತುಗಳನ್ನ ಕೊಡ್ತಿದ್ದಾರೆ. ಅದರ ಮೇಲೆ ತಮ್ಮ ಪಕ್ಷದ ಚಿಹ್ನೆ ಮತ್ತು ಶಾಸಕರ ಹೆಸರು ಹಾಕಿಕೊಂಡು ಹಂಚುತ್ತಿದ್ದಾರೆ. ಇಂತವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನ ಜರಗಿಸಬೇಕು. ಇಂತಹ ಸಂದರ್ಭಗಳಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ರೈತರು, ಸಣ್ಣಪುಟ್ಟ ಉದ್ಯಮಿಗಳು, ಕಾರ್ಮಿಕರ ಬಗ್ಗೆ ಏನಾದರೂ ಉಪಾಯ ಹುಡುಕುತ್ತಾರೆ ಅಂದುಕೊಂಡಿದ್ವಿ. ಆದರೆ, ಪ್ರಧಾನಿ ಭಾಷಣದಲ್ಲಿ ಏನೂ ಇರಲಿಲ್ಲ. ಇದು ನಮಗೆ ನಿರಾಶೆ ತಂದಿದೆ. ಅಂಬೇಡ್ಕರ್ ತತ್ವಗಳನ್ನ ಅಳವಡಿಸಿಕೊಂಡು ಅವರು ಅಧಿಕಾರ ನಡೆಸಲಿ ಎಂದು ಸಲಹೆ ನೀಡಿದರು. ಬಿಡಿಎ ನಿವೇಶನ ಈ ಸಂದರ್ಭದಲ್ಲಿ ಮಾರಾಟಕ್ಕೆ ಇಡಬೇಡಿ. ಜನರ ಬಳಿ ದುಡ್ಡು ಇಲ್ಲದೇ ಇದ್ದಾಗ ಹರಾಜಿಗೆ ಹೇಗೆ ಬರ್ತಾರೆ. ಸರ್ಕಾರದ ಆಸ್ತಿ ಕಡಿಮೆ ಹಣಕ್ಕೆ ಮಾರುವ ಕೆಲಸ ಮಾಡಬೇಡಿ. ಮೊದಲು ಈ ಕ್ರಮದಿಂದ ಹಿಂದೆ ಸರಿಯಿರಿ ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.