ಬೆಂಗಳೂರು:ಬಾಲ್ಕಿ ಪುರಸಭೆ ವ್ಯಾಪ್ತಿಯ ವಸತಿ ಯೋಜನೆಗಳಿಗೆ ಸೀಮಿತವಾಗಿ ತನಿಖೆಗೆ ವಸತಿ ಸಚಿವ ವಿ.ಸೋಮಣ್ಣ ಆದೇಶಿಸಿರುವುದು ಬಿಜೆಪಿಯ ದ್ವೇಷದ ರಾಜಕೀಯಕ್ಕೆ ನಿದರ್ಶನ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ದೂರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆಯ ಹಣ ಮಂಜೂರಾತಿ ತಡೆ ಹಿಡಿಯುವ ಬದಲು ಇಡೀ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಾದ ವಸತಿ ಯೋಜನೆಗಳ ಕುರಿತು ನ್ಯಾಯಾಂಗ ತನಿಖೆ ಮಾಡಿಸಿ ಎಂದು ಆಗ್ರಹಿಸಿದ್ದಾರೆ.
ಹಿಂದಿನ ಸರ್ಕಾರದ ವಸತಿ ಯೋಜನೆಗಳಿಗೆ 211 ಕೋಟಿ ರೂಪಾಯಿ ಹಣ ವಸತಿ ಯೋಜನೆಗೆ ಕೊಡುತ್ತಿದ್ದೇವೆ ಎಂದು ಸೋಮಣ್ಣ ಹೇಳುತ್ತಾರೆ. ಆದರೆ ಇದು ಕೇವಲ ಕಣ್ಣೊರೆಸುವ ತಂತ್ರ ಮಾತ್ರ. ಹಾಲಿ ಯೋಜನೆಗಳಿಗೆ ಸಾವಿರದಿಂದ ಒಂದೂವರೆ ಸಾವಿರ ಕೋಟಿ ಹಣ ಬೇಕು. ಆದ್ರೆ ಕಳೆದ ಎಂಟು ತಿಂಗಳಿನಿಂದ ಹಣ ಬಿಡುಗಡೆ ಆಗಿಲ್ಲ. ಸರ್ಕಾರವೇ ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ರೀತಿ ವರ್ತಿಸುತ್ತಿದೆ. ನ್ಯಾಯಯುತವಾಗಿ ಅವರಿಗೆ ಬರುವ ಹಣವ್ನನು ಬೇರೆಡೆ ತಿರುಗಿಸಿ, ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಕಟ್ಟಿಸಲು ಹೊರಟಿರುವುದು ಘೋರ ಅನ್ಯಾಯ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿನ 7 ಲಕ್ಷ ಮನೆ ವಾಪಸ್ ಪಡೆಯುವ ಹೇಳಿಕೆಯನ್ನು ಸಚಿವ ಸೋಮಣ್ಣ ನೀಡಿದ್ದಾರೆ. ಇದರ ಹಿಂದೆ ರಾಜಕೀಯ ಅಡಗಿದೆ, 3 ಲಕ್ಷ ಕ್ರಮ ಬದ್ಧವಾಗಿರುವ ಮನೆಗಳಿದ್ದಾವೆ, ಎಲ್ಲಾ ನಿಯಮಾವಳಿ ಮುಗಿಸಿವೆ. ಉಳಿದವು ಮಂಜೂರಾತಿ ಹಂತದಲ್ಲಿವೆ. ಈಗ ಬೇರೆಡೆ ಮನೆ ಕಟ್ಟುತ್ತೇವೆ, ಬೇರೆಯವರಿಗೆ ಕೊಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಖಂಡ್ರೆ ಕಿಡಿಕಾರಿದ್ರು.
ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ಹೈಕಮಾಂಡ್ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ, ಯಾರಿಗೆ ಕೊಟ್ಟರೆ ಪಕ್ಷ ಬಲವರ್ಧನೆಯಾಗಲಿದೆ ಎನ್ನುವುದನ್ನು ತಿಳಿದು ಹೈಕಮಾಂಡ್ ನಿರ್ಧರಿಸಲಿದೆ. ಆದರೆ ಈ ವಿಚಾರ ಸಂಬಂಧ ನಾನು ಹೈಕಮಾಂಡ್ ಭೇಟಿ ಮಾಡಲ್ಲ, ಮುಂದೆ ಅಗತ್ಯವಿದ್ದರೆ ಮಾತ್ರ ಭೇಟಿ ಮಾಡಲಿದ್ದೇನೆ ಎಂದರು.
ಮಂಗಳೂರು ಹಿಂಸಾಚಾರ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಆದರೆ ಘಟನೆಯ ಸತ್ಯಾಸತ್ಯತೆ ಬಹಿರಂಗವಾಗಲು ನ್ಯಾಯಾಂಗ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಬೇಕು ಎಂದು ಖಂಡ್ರೆ ಆಗ್ರಹಿಸಿದರು.
ಇನ್ನು, ಜ್ಯೋತಿ ನಿವಾಸ ಕಾಲೇಜಿಗೆ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಕ್ಕೆ ಗೃಹ ಸಚಿವರು ವಿರೋಧಿಸಿದ್ದು ಖಂಡನೀಯ. ಪ್ರತಿಯೊಂದನ್ನೂ ಕಾಮಾಲೆಯ ಕಣ್ಣನಿಂದ ನೋಡುತ್ತಾರೆ. ಕಾನೂನು ಸುವ್ಯವಸ್ಥೆ ಹದಗೆಡಲು ಬಿಜೆಪಿ ಸರ್ಕಾರವೇ ಕಾರಣವೆಂದು ವಾಗ್ದಾಳಿ ನಡೆಸಿದ್ರು.