ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ನಿಂದ ಹಿಡಿದು ಎಸಿಪಿ ದರ್ಜೆಯವರೆಗಿನ ಅಧಿಕಾರಿಗಳ ದನಿಯನ್ನು ಧಮನ ಮಾಡುವತ್ತ ಇಲಾಖೆ ಕುರುಡು ಹೆಜ್ಜೆ ಇರಿಸಿದೆ. ಇದೇ ತಿಂಗಳ 7 ರಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಗಳು KSP (DP) ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ KSP (DP) Amendment Rules 2022 ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಇದಕ್ಕೆ ಕೇವಲ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಈ ತಿದ್ದುಪಡಿಯಿಂದ ಪೊಲೀಸರಿಗೆ ಶಿಕ್ಷೆ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನಗಳು ಕಾಡಿವೆ.
ಇಷ್ಟಕ್ಕೂ ಈ ತಿದ್ದುಪಡಿಯನ್ನು ಗಮನಿಸಿದಾಗ ಸಂಪೂರ್ಣವಾಗಿ ಪೊಲೀಸರನ್ನು ಪ್ರಶ್ನಿಸುವ ಅಧಿಕಾರ ಮೊಟಕುಗೊಳಿಸುವ ಯತ್ನ ಎನ್ನುವುದು ಸ್ಪಷ್ಟವಾಗುತ್ತಿದೆ. ಹೊಸ ತಿದ್ದುಪಡಿಯ ಪ್ರಕಾರ ಇನ್ಮುಂದೆ ಹಿರಿಯ ಅಧಿಕಾರಿಗಳು ಕೆಳ ಹಂತದ ಅಧಿಕಾರಿ/ಸಿಬ್ಬಂದಿ ಮೇಲೆ ಶಿಸ್ತುಕ್ರಮಕ್ಕೆ ಮುಂದಾದ್ರೆ ಅದನ್ನು ಯಾರೂ ಪ್ರಶ್ನಿಸುವ ಅಧಿಕಾರವಿರುವುದಿಲ್ಲ. ಈ ಹಿಂದೆ ಶಿಸ್ತು ಕ್ರಮಗಳನ್ನ ಪ್ರಶ್ನಿಸಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಅಥವಾ ನ್ಯಾಯಾಲಯದ ಮೊರೆಹೋಗಬಹುದಿತ್ತು. ಆದ್ರೆ ಹೊಸ ತಿದ್ದುಪಡಿಯಲ್ಲಿ ಅದಕ್ಕೆ ಅವಕಾಶವೇ ಇರುವುದಿಲ್ಲ. ಆಪಾದಿತ ಅಧಿಕಾರಿ/ಸಿಬ್ಬಂದಿ ತಮ್ಮ ಭತ್ಯೆ ಅಥವಾ ಪ್ರಮೋಷನ್ ತಡೆ ಹಿಡಿದರೂ ಸಹ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದಂತಾಗುತ್ತದೆ.